ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಸಲುವಾಗಿ ಆರ್‌ಎಸ್‌ಆರ್ ಪೂರ್ಣ ಪ್ರಮಾಣದಲ್ಲಿ “ಅಖಾಡ’ಕ್ಕಿಳಿಯಲಿದ್ದು 400 ಸ್ವಯಂ ಸೇವಕರು ರಾಜ್ಯಾದ್ಯಮತ ತಳಮಟ್ಟದಲ್ಲಿ ಕೆಲಸ ಮಾಡಲಿದ್ದಾರೆ.
ದೇಶದ ವಿವಿಧೆಡೆಯ 400 ಸ್ವಯಂ ಸೇವಕರಿಗೆ ಕರ್ನಾಟಕದ ವಿಧಾನಸಭೆ ಚುನಾವಣೆ ಉಸ್ತುವಾರಿ ವಹಿಸಲಾಗಿದ್ದು, ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಇಬ್ಬರು, ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬರಂತೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
400 ಸ್ವಯಂ ಸೇವಕರ ಪೈಕಿ 100 ಮಂದಿಯನ್ನು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಯ್ಕೆ ಮಾಡಿದ್ದಾರೆ. ಇವರು ಗುಜರಾತ್, ಉತ್ತರಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.
ಮಿಷನ್ 150 ಗುರಿಯೊಂದಿಗೆ ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನೂ 25 ಕ್ಷೇತ್ರಗಳ ಅವಶ್ಯಕತೆ ಬರಲಿದೆ ಎಂಬುದು ಆಂತರಿಕ ಸಮೀಕ್ಷೆಯಿಂದ ಗೊತ್ತಾಗಿದ್ದು ಆ ಆಧಾರದ ಮೇಲೆ ಸ್ವಯಂ ಸೇವಕರನ್ನು ಪ್ರಯತ್ನಪಟ್ಟರೆ ಗೆಲ್ಲುವ ಕ್ಷೇತ್ರಗಳಿಗೆ ನಿಯೋಜಿಸಿ ಗೆಲುವಿಗೆ ಕಾರ್ಯತಂತ್ರ ರೂಪಿಸುವ ಹೊಣೆಗಾರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಪಕ್ಷದ ಅಭ್ಯರ್ಥಿಗಳ ಜತೆ ನೇರ ಸಂಪರ್ಕ ಸಾಧಿಸಲಿರುವ ಸ್ವಯಂ ಸೇವಕರು ಎಲ್ಲೆಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ಇದೆ, ಪಕ್ಷ ಹೆಚ್ಚು ಗಮನಹರಿಸಬೇಕಾದ ಪ್ರದೇಶಗಳು ಯಾವುವು? ಅಲ್ಲಿರುವ ಸಮುದಾಯ, ಯುವ ಸಮೂಹ, ವ್ಯಾಪಾರಿ ವರ್ಗ ಸೆಳೆಯಲು ಏನು ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಲಿದೆ ಎಂದು ಹೇಳಲಾಗಿದೆ.