ದೇವದುರ್ಗ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುವ ಸಂಕಲ್ಪವನ್ನು ಬಿಜೆಪಿ ಹೊಂದಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಹಿಮಾಚಲಪ್ರದೇಶ ಸಂಸದ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
ಸಮೀಪದ ಹೂವಿನಹೆಡ್ಗಿ ಗ್ರಾಮದಲ್ಲಿ ಬುಧವಾರ ನಡೆದ ದೇವದುರ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐದು ವರ್ಷ ನೆನಪಾಗದ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಈಗ ಚುನಾವಣೆ ಸಮಯದಲ್ಲಿ ನೆನಪಾಗಿದೆ. ಲಿಂಗಾಯತ ಮತ ಸೆಳೆಯಲು ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗಿದ್ದು, ಧರ್ಮ, ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಮುಂಬರುವ ಚುನಾಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದೆ. ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಬಿಜೆಪಿ ಸಂಕಲ್ಪಕ್ಕೆ ಕಾಲ ಕೂಡಿ ಬಂದಿದೆ ಎಂದರು.
ಬೂತ್ ಮಟ್ಟದ ಕಾರ್ಯಕರ್ತರು ಪ್ರತಿಯೊಂದು ಹಳ್ಳಿಗಳಲ್ಲಿ ಸಂಚರಿಸಿ ಶಾಸಕರು ಮಾಡಿದ ಅಭಿವೃದ್ಧಿ ಕಾರ್ಯ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು ಎಂದರು. ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ತಾಲೂಕು ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರದ ಸಂಸದ, ಸಚಿವರು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದರಿಂದಾಗಿ ತಾಲೂಕು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಬಿಜೆಪಿ ಸರಕಾರ ಆಡಳಿತ ಅವಧಿಯಲ್ಲಿ ತಾಲೂಕು ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಲು ಕಾಂಗ್ರೆಸ್ ನಾಯಕರು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಮತದಾರರು ಕಾಂಗ್ರೆಸ್‌ಗೆ ಪಾಠ
ಕಲಿಸಲಿದ್ದಾರೆ ಎಂದರು.
ಮುಖಂಡರಾದ ಬಸನಗೌಡ ಬ್ಯಾಗವಾಟ, ತ್ರಿವಿಕ್ರಮ ಜೋಶಿ, ಕೆ.ಎಂ.ಪಾಟೀಲ, ತಾಪಂ ಅಧ್ಯಕ್ಷ ಹನುಮಂತ ಕಟ್ಟಮನಿ, ಶ್ಯಾಮರಾವ್ ಕುಲಕರ್ಣಿ, ಪ್ರಕಾಶ ಪಾಟೀಲ, ಜಂಬಣ್ಣ ನೀಲಗಲ್, ಚಂದ್ರಶೇಖರ ಚಲುವಾದಿ ಇತರರು ಇದ್ದರು.