Advertisement

ಪ್ರಿಯಾಂಕ್‌ ಸೋಲಿಸಲು ಬಿಜೆಪಿ ಹೆಣೆಯುತ್ತಿದೆ ತಂತ್ರ; ಸವದಿ ಸಮ್ಮುಖ ಗುಪ್ತ ಸಭೆ

06:26 PM Sep 28, 2022 | Team Udayavani |

ವಾಡಿ: ಸರ್ಕಾರದ ವಿರುದ್ಧ ಸದಾ ಟೀಕೆಗಳನ್ನು ಮಾಡುತ್ತಾ ಗಮನ ಸೆಳೆಯುತ್ತಿರುವ ಕೆಪಿಸಿಸಿ ವಕ್ತಾರ ಆಗಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಅವರನ್ನು ಬರುವ ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಬಿಜೆಪಿ ಈಗಲೇ ತಂತ್ರಗಾರಿಕೆ ಶುರು ಮಾಡುತ್ತಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

Advertisement

ಹಿರಿಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ಆಯ್ಕೆಯಾದ ನಂತರ ಚಿತ್ತಾಪುರ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆ ಅವರನ್ನು ಸೋಲಿಸಿದ ನಿಟ್ಟಿನಲ್ಲಿ ಈಗ ಬರುವ ಚುನಾವಣೆಯಲ್ಲಿಯೂ ಎಲ್ಲ ತಂತ್ರಗಾರಿಕೆಯೊಂದಿಗೆ ಸೋಲಿಸುವ ಕುರಿತು ಈಗಲೇ ಬಿಜೆಪಿಯಲ್ಲಿ ಚರ್ಚೆ ಹಾಗೂ ಸಭೆಗಳು ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಮಾಜಿ ಶಾಸಕ ವಾಲ್ಮೀಕಿ ನಾಯಕ ಅಕಾಲಿಕ ನಿಧನದ ಬಳಿಕ ಕಳೆದ ಒಂದು ವರ್ಷದಿಂದ ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರದ ಕಮಲ ಕೋಟೆ ಅರಸನಿಲ್ಲದ ಅರಮನೆಯಂತಾಗಿದೆ. ಸ್ಪರ್ಧೆಗೆ ಹಲವರ ಹೆಸರುಗಳು ಮುಂಚೂಣಿಗೆ ಬರುತ್ತಿವೆ. ಶಾಸಕ ಪ್ರಿಯಾಂಕ್‌ ಖರ್ಗೆ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಳೆದ ಐದಾರು ವರ್ಷಗಳಿಂದ ಚಿಂತಿಸುತ್ತಿರುವ ಬಿಜೆಪಿ ಹೈಕಮಾಂಡ್‌ಗೆ ಈಗಲೂ ಈ ತಲೆಬಿಸಿ ತಣ್ಣಗಾಗಿಲ್ಲ.

ಈ ನಡುವೆ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡೇ ಚಿತ್ತಾಪುರ ಕಮಲ ಕೋಟೆಗೆ ಲಗ್ಗೆಯಿಟ್ಟಿರುವ ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಗುರುಮಠಕಲ್‌ ಮೂಲದ ಉದ್ಯಮಿ ಮಣಿಕಂಠ ರಾಠೊಡ ಪ್ರತ್ಯೇಕವಾಗಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿ ಜನರಿಗೆ ಹತ್ತಿರವಾಗಲು ಹರಸಾಹಸ ನಡೆಸುತ್ತಿದ್ದಾರೆ.

ಕ್ಷೇತ್ರದ ನಿವಾಸಿಗಳಾದ ಮಾಜಿ ಜಿಪಂ ಸದಸ್ಯ ಬಸವರಾಜ ಬೆಣ್ಣೂರ, ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ ಅವರ ಪುತ್ರ, ಉದ್ಯಮಿ ವಿಠಲ ವಾಲ್ಮೀಕಿ ನಾಯಕ ಸೇರಿ ಹಲವು ಆಕಾಂಕ್ಷಿಗಳ ಹೆಸರುಗಳು ಪಟ್ಟಿಯಲ್ಲಿವೆ. ಆರ್‌ಎಸ್‌ಎಸ್‌ ಹಿನ್ನೆಲೆಯ ಕಲಬುರಗಿ ಮುಖಂಡ ಸುರೇಶ ರಾಠೊಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಪಟ್ಟಿ ಇಷ್ಟಕ್ಕೆ ಮುಗಿಯದೇ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡದಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

Advertisement

ಪ್ರಿಯಾಂಕ್‌ ಮೇಲೆ ಸಂಸದ ಡಾ| ಉಮೇಶ ಜಾಧವ ಕಣ್ಣು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿಲ್ಲದ ಸರ್ದಾರ ಡಾ|ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ದೇಶದ ಗಮನ ಸೆಳೆದ ಸಂಸದ ಡಾ|ಉಮೇಶ ಜಾಧವ ಅವರಿಗೆ ಇನ್ನೂ ಸಮಾಧಾನವಾಗಿಲ್ಲ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರದಿಂದ ಸ್ಪರ್ಧಿಸಿ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆಯನ್ನು ಸೋಲಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಪ್ರಮುಖವಾಗಿ ಬಿಜೆಪಿ ಹೈಕಮಾಂಡ್‌ಗೆ ಸ್ಪರ್ಧೆ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಡಾ|ಜಾಧವ ಸಣ್ಣಪುಟ್ಟ ಅಭಿಮಾನಿಗಳ ವೈಯಕ್ತಿಕ ಕಾರ್ಯಕ್ರಮಗಳಿಗಾಗಿ ಪದೇಪದೇ ಚಿತ್ತಾಪುರ ಕ್ಷೇತ್ರಕ್ಕೆ ಬಂದು ಹೋಗುವ ಮೂಲಕ ಜನರ ಸಂಪರ್ಕ ಸಾಧಿಸುತ್ತಿದ್ದಾರೆ ಎನ್ನಲಾಗಿದೆ. ಭ್ರಷ್ಟಾಚಾರ ಬಯಲಿಗೆಳೆಯುವ ಭರದಲ್ಲಿ ಈಗಾಗಲೇ ಸರ್ಕಾರಕ್ಕೆ ತಲೆನೋವಾಗಿರುವ ಪ್ರಿಯಾಂಕ್‌ ಖರ್ಗೆ, ಮತ್ತೂಮ್ಮೆ ಗೆದ್ದರೆ ಇವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂಬ ಆತಂಕ ಬಿಜೆಪಿಯ ಹೈಕಮಾಂಡ್‌ನ‌ಲ್ಲಿದ್ದು, ರಾಜ್ಯಮಟ್ಟದಲ್ಲಿ ಅವಲೋಕನ ನಡೆಸುತ್ತಿದೆ ಎನ್ನಲಾಗಿದೆ.

ಸವದಿ ಸಮ್ಮುಖ ಗುಪ್ತ ಸಭೆ
ಚಿತ್ತಾಪುರದಲ್ಲಿ ಅಭಿಮಾನಿಗಳ ಪಡೆ ಕಟ್ಟಿಕೊಂಡು ಪ್ರಚಾರಕ್ಕಿಳಿದಿರುವ ಆಕಾಂಕ್ಷಿಗಳ ಸಭೆ ಇತ್ತೀಚೆಗೆ ಬೆಂಗಳೂರಿನಲ್ಲಿ ಗುಪ್ತವಾಗಿ ನಡೆದಿದ್ದು, ಭಾಜಪ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಇವರೆಲ್ಲರನ್ನು ಒಂದುಗೂಡಿಸುವ ಪ್ರಯತ್ನ ನಡೆಸಿದ್ದಾರೆ. ಚಿತ್ತಾಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಕೈಗೊಂಡಿರುವ ಪಕ್ಷ ಸಂಘಟನಾ ಕಾರ್ಯದ ಮೇಲೆ ನಿಗಾವಹಿಸಲಾಗಿದೆ. ಪ್ರತಿಯೊಬ್ಬರ ಕಾರ್ಯಚಟುವಟಿಕೆ ಮತ್ತು ಸಾಮರ್ಥ್ಯ ಅವಲೋಕಿಸಲಾಗುತ್ತಿದೆ. ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವುದನ್ನು ಅಂತಿಮವಾಗಿ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ. ಅಲ್ಲಿಯ ವರೆಗೆ ಗುಂಪುಗಾರಿಕೆ ಮಾಡದೆ ಸಂಘಟಿತರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು.

ಯಾರಿಗೆ ಟಿಕೆಟ್‌ ಸಿಗುವುದಿಲ್ಲವೋ ಅವರಿಗೆ ಪಕ್ಷದಲ್ಲಿ ಮುಖ್ಯ ಜವಾಬ್ದಾರಿ ನೀಡಲಾಗುತ್ತದೆ ಎಂದು ಸವದಿ ಕಿವಿಮಾತು ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆಕಾಂಕ್ಷಿಗಳಲ್ಲಿ ಒಬ್ಬರು ಹಾಲಿ ಪಾರ್ಲಿಮೆಂಟ್‌ ಸದಸ್ಯರು, ಇಬ್ಬರು ಜಿಪಂ ಕ್ಷೇತ್ರ ಗೆದ್ದವರು, ಒಬ್ಬರು ಮಾಜಿ ಶಾಸಕರ ಪುತ್ರ, ಮೂವರು ಉದ್ಯಮಿಗಳು. ಈ ಆರು ಜನರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಟಿಕೆಟ್‌ ಯಾರಿಗುಂಟು-ಯಾರಿಗಿಲ್ಲ ಎಂಬಂತಾಗಿದೆ.

*ಮಡಿವಾಳಪ್ಪ ಹೇರೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next