ಶಿವಮೊಗ್ಗ: ಹರ್ಷನ ಕಳಕೊಂಡು 8 ತಿಂಗಳು ಆಗಿದೆ, ಈಗಲೂ ಪ್ರೇಮಸಿಂಗ್ ಚೂರಿ ಇರಿತ ಸೇರಿದಂತೆ ಪ್ರಕರಣ ನಡೆಯುತ್ತಲೇ ಇದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಇದೆ, ಮೇಲಾಗಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಇದೆ.ನಮಗೆ ರಕ್ಷಣೆ ಯಾವಾಗ ಸಿಗುತ್ತದೆ ಎಂದು ಹರ್ಷ ಸಹೋದರಿ ಅಶ್ವಿನಿ ಮಂಗಳವಾರ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಸುದಿಗಾರರೊಂದಿಗೆ ಮಾತನಾಡಿ,ಹಿಂದುತ್ವದ ಕೆಲಸ ಮಾಡುತ್ತಿದ್ದ ಎಂದು ಹರ್ಷನ ಟಾರ್ಗೆಟ್ ಮಾಡಿ ಹೊಡೆದರು. ಅಂಥವನನ್ನೇ ಕೊಲ್ಲುತ್ತಾ ರೆಂದರೆ, ನಮಗೆ ಯಾವ ರಕ್ಷಣೆ ಕೊಡುತ್ತೀರಿ ಎಂದು ಬಿಜೆಪಿ ಸರಕಾರವನ್ನು ಪ್ರಶ್ನಿಸಿದ್ದಾರೆ.
ನಮ್ಮ ಮನೆ ಪರಿಸ್ಥಿತಿ ಕೇಳುವುದಕ್ಕೆ ಯಾರೂ ಇಲ್ಲ. ಹರ್ಷ ಸತ್ತಾಗ ಪ್ರತಿಯೊಬ್ಬರೂ ಬಂದು ನಾವಿದ್ದೇವೆ ಎಂದರು. ನಾಳೆ ನಾವು ಸತ್ತಾಗಲೂ ಇದನ್ನೇ ಹೇಳುತ್ತಾರೆ. ಮಕ್ಕಳನ್ನು ಸಾಯಿಸಿದಾಗ ನಮ್ಮ ಅಪ್ಪ-ಅಮ್ಮನ ಗತಿ ಏನಾಗಬೇಕು? ನಾವು ಯಾರ ಹತ್ತಿರ ಹೋಗಿ ಕೇಳೋಣ? ಯಾರಿಗೆ ನೀವು ಮೊದಲು ರಕ್ಷಣೆ ಕೊಡುವುದು ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಕೇಸರಿಬಾವುಟ ಹಿಡಿದ ಗುಂಪಿನಿಂದ ಅನ್ಯಕೋಮಿನ ವ್ಯಕ್ತಿಯ ಕಾರು ಜಖಂ: ಹರ್ಷ ಸಹೋದರಿ ವಿರುದ್ದ FIR
ನಾವಿಬ್ಬರೂ ಹೆಣ್ಣು ಮಕ್ಕಳು ಇರುವುದು.ಅಣ್ಣ-ತಮ್ಮ ನಮಗಿಲ್ಲ, ಸಮಾಜದಲ್ಲಿ ಇರುವವರೆ ಅಣ್ಣ ತಮ್ಮಂದಿರು. ಯಾವ ಧರ್ಮದವರನ್ನೂ ನಾವು ಬೈದಿಲ್ಲ. ಬೇರೆ ಧರ್ಮದವರು ಮಾಡಿದ್ದಂತ ಗೊತ್ತಿದ್ದೂ ಸುಮ್ಮನಿದ್ದೆವು.ಯಾರೋ ಹತ್ತು ಜನ ಮಾಡಿದ್ದಕ್ಕೆ ಇಡೀ ಸಮಾಜವನ್ನು ಬೈಯಬಾರದು ಎಂದರು.
ಜೈರಾಮ, ಶ್ರೀರಾಮ್ ಹೇಳಿ ಕಾರಿಗೆ ಹಾನಿ ಮಾಡಿದ್ದೇವಂತೆ.ಹುಲಿಯಂತಹ ತಮ್ಮನನ್ನು ಕಳಕೊಂಡಿದ್ದೇನೆ. ಕಾರನ್ನೆಲ್ಲ ಹೊಡೆಯುತ್ತೇವಾ ನಾವು ಎಂದು ಪ್ರಶ್ನಿಸಿದರು.
ಇಡೀ ಕರ್ನಾಟಕ ಹೆದರಿಸಲು ಹರ್ಷನ ಕೊಂದಿದ್ದಾರೆ. ಅವನನ್ನು ದೇವರಂತೆ ಪೂಜಿಸುತ್ತೇವೆ. ನಮ್ಮ ಮನೆಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿಕೊಂಡರು.