ಚಿತ್ತಾಪುರ: ಭಾರತೀಯ ಜನತಾ ಪಕ್ಷದ ಮುಖಂಡರು ಅಕ್ರಮ ವ್ಯವಹಾರ ಮಾಡಲು ಸಹಕಾರ ನೀಡಿ, ಸಿಕ್ಕಿಬಿದ್ದಾಗ ಜಾರಿಕೊಳ್ಳುತ್ತಾರೆ ಆದ್ದರಿಂದ ಆ ಪಕ್ಷದ ಕಾರ್ಯಕರ್ತರು ಹುಷಾರಾಗಿರಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಭೀಮನಹಳ್ಳಿ ಗ್ರಾಮದಲ್ಲಿ 18.95 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಕ್ಕೆ ಅಡಿಗಲ್ಲು ನೆರವೇರಿಸಿ ಹಾಗೂ ಭೀಮನಹಳ್ಳಿ ತಾಂಡಾದಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಎರಡು ಶಾಲಾ ಕೋಣೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಟತೆಯಲ್ಲಿ ತೊಡಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದು ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಈ ಅಕ್ರಮ ನಡೆದಿದ್ದು ಕಲಬುರಗಿಯಲ್ಲೇ. ಇದರಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯೂ ಭಾಗಿಯಾಗಿದ್ದಾರೆ. ಈಗ ಸಿಐಡಿ ತನಿಖೆ ನಡೆಯುತ್ತಿದೆ. ಆದರೀಗ ಅವರಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿ ಬಿಜೆಪಿ ನಾಯಕರು ಜಾರಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರಕ್ಕೆ ಜನರ ಅಭಿವೃದ್ದಿ ಬೇಕಾಗಿಲ್ಲ. ಬರೀ ಲೂಟಿಯಲ್ಲೇ ತೊಡಗಿದೆ. ಸಚಿವರುಗಳಿಗೆ ಶೇ.40 ಕಮಿಷನ್ ಕೊಡದೆ ಬಿಲ್ ಪಾವತಿ ಮಾಡಲ್ಲ ಎಂದು ಗುತ್ತಿಗೆದಾರರು ನೇರವಾಗಿಯೇ ಹೇಳುತ್ತಿದ್ದಾರೆ. ಈ ಕುರಿತು ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಂತೋಷ ಎನ್ನುವ ಗುತ್ರಿಗೆದಾರರ ಕಮಿಷನ್ ಕೊಡಲು ಸಾಧ್ಯವಾಗದೇ ಆತ್ಮಹತ್ಯೆ ಕೂಡಾ ಮಾಡಿಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ತಾಪುರ ಬಿಜೆಪಿ ನಾಯಕರಿಗೆ ಅಭಿವೃದ್ದಿಯ ಯಾವುದೇ ದೂರದೃಷ್ಟಿಯಿಲ್ಲ. ಆದರೂ ನಾಯಕತ್ವಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಜನರಿಗಾಗಿ ದುಡಿಯಬೇಕು. ಅಂದಾಗಲೇ ಮಾತ್ರ ಜನರು ಆಶೀರ್ವಾದ ಮಾಡುತ್ತಾರೆಯೇ ಹೊರತು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ನಾಯಕರಾಗಲ್ಲ ಎನ್ನುವುದನ್ನು ಮನಗಾಣಬೇಕು ಎಂದು ಟೀಕಿಸಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಭೀಮಣ್ಣ ಸಾಲಿ, ರಮೇಶ ಮರಗೋಳ, ಸಿದ್ಧುಗೌಡ ಅಫಜಲಪುರಕರ ಹಾಗೂ ಗ್ರಾಮಸ್ಥರು ಇದ್ದರು.
ಭೀಮನಹಳ್ಳಿ ಗ್ರಾಮಸ್ಥರ ಬೇಡಿಕೆಯಂತೆ ಭೀಮನಹಳ್ಳಿ ರಾಜೋಳ್ಳ ಗ್ರಾಮದವರೆಗೆ ರಸ್ತೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು.
-ಪ್ರಿಯಾಂಕ್ ಖರ್ಗೆ, ಶಾಸಕ