ಸುಳ್ಯ: ನ.ಪಂ. ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್ ಈ ಬಾರಿ ವಿನೂತನ ಪ್ರಚಾರ ಕಾರ್ಯಕ್ಕೆ ಇಳಿದಿದೆ. ನಗರಾಡಳಿತದಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಕಾಂಗ್ರೆಸ್ ತಂಡ ಸೋಮವಾರ ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಆರೋಪಿಸಿದೆ.
ಕಳೆದ ಅನೇಕ ವರ್ಷಗಳಿಂದ ಸುಳ್ಯ ನಗರ ಪಂಚಾಯತ್‌ನಲ್ಲಿ ಆಡಳಿತ ನಡೆಸಿದ ಬಿಜೆಪಿ ಸುಳ್ಯ ನಗರವನ್ನು ಗಬ್ಬೆಬ್ಬಿಸಿದೆ. ಇದಕ್ಕೆ ಸುಳ್ಯ ನಗರದ ಹಲವೆಡೆ ಕಾಣುವ ಅವ್ಯವಸ್ಥೆ ಮತ್ತು ಅಪೂರ್ಣ ಕೆಲಸಗಳೇ ಸಾಕ್ಷಿ ಎಂದು ತಂಡದ ನೇತೃತ್ವ ವಹಿಸಿದ ನ.ಪಂ. ಮಾಜಿ ಅಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಆರೋಪಿಸಿದ್ದಾರೆ.
ಜಟ್ಟಿಪಳ್ಳದ ಒಳಚರಂಡಿ ವೆಟ್‌ವೆಲ್, ಕಂದಡ್ಕ ಮೂಲಕ ನದಿಗೆ ಹರಿಯುವ ತ್ಯಾಜ್ಯ, ಹೊಸಗದ್ದೆಯ ಒಳಚರಂಡಿ ಶುದ್ಧೀಕರಣ ಘಟಕ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗೆ ಬಿಜೆಪಿ ಆಡಳಿತವೇ ನೇರ ಹೊಣೆ ಎಂದು ಆರೋಪಿಸಿದರು.
ಅವ್ಯವಸ್ಥೆ ಆಡಳಿತ ಅರ್ಥ ಮಾಡಿಕೊಂಡು ಜನರು ಬಿಜೆಪಿ ತಿರಸ್ಕರಿಸಬೇಕು. ಈ ಬಾರಿ ಕಾಂಗ್ರೆಸ್ ಪರ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.
ನ.ಪಂ. ಮಾಜಿ ಸದಸ್ಯರಾದ ಕೆ.ಎಂ. ಮುಸ್ತಫಾ, ಜೂಲಿಯಾನಾ ಕ್ರಾಸ್ತಾ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೋ, ರಿಯಾಝ್ ಕಟ್ಟೆಕ್ಕಾರ್, ಧೀರಜ್ ಕ್ರಾಸ್ತಾ, ಲಕ್ಷ್ಮಣ ಶೆಣೈ ಉಪಸ್ಥಿತರಿದ್ದರು.