Advertisement

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಬದ್ಧ: ಬಸವರಾಜ ಬೊಮ್ಮಾಯಿ

12:04 PM Oct 07, 2022 | Team Udayavani |

ಬೆಂಗಳೂರು: ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಬದ್ಧವಾಗಿದೆ. ನಾಗಮೋಹನ್ ದಾಸ್, ಸುಭಾಷ್ ಆಡಿ ವರದಿ ಜಾರಿ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಬದ್ಧವಿದೆ. ಈ ಸಂಬಂಧ ಸರ್ವಪಕ್ಷಗಳ ಸಭೆಯಲ್ಲೂ ಚರ್ಚಿಸಲಾಗುವುದು. ಎಲ್ಲ ಶೋಷಿತ- ವಂಚಿತ ವರ್ಗಗಳಿಗೆ ನ್ಯಾಯ ಕೊಡಲು ದಿಟ್ಟ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Advertisement

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯು ನಗರದ ಅರಮನೆ ಮೈದಾನದ ‘ತ್ರಿಪುರ ವಾಸಿನಿ’, ಗೇಟ್ ನಂ.2ರಲ್ಲಿ ಇಂದು ಆರಂಭಗೊಂಡಿತು. ಇದರಲ್ಲಿ ಮಾತನಾಡಿದ ಅವರು, ಜನಪರ ಕಾರ್ಯಕ್ರಮಗಳಿಗೆ ನಾವು ಬದ್ಧರಾಗಿದ್ದೇವೆ. ಚುನಾವಣೆಗೆ ನಮ್ಮ ಕಾರ್ಯತಂತ್ರ ಕುರಿತಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಇದೊಂದು ಮಹತ್ವದ ಸಭೆ. ರಾಜ್ಯ ಕಾರ್ಯಕಾರಿಣಿಯನ್ನು ಪ್ರತಿ 3 ತಿಂಗಳಿಗೊಮ್ಮೆ ನಡೆಸುವ ಕಾರ್ಯಸೂಚಿಗಳನ್ನು ಕಾರ್ಯಾನುಷ್ಠಾನ ಮಾಡುವ ಜನರಿಗೆ ಹತ್ತಿರ ಇರುವ ಚಲನಶೀಲ ಪಕ್ಷ ನಮ್ಮದು. ಕಾರ್ಯಕ್ರಮಗಳು, ರಾಜಕೀಯ ಸ್ಥಿತಿಗತಿಗಳ ಅವಲೋಕನ ಮಾಡಲಾಗುತ್ತಿದೆ. ಬೇರೆ ಪಕ್ಷಗಳಲ್ಲಿ ಪ್ರಜಾಪ್ರಭುತ್ವ ಇಲ್ಲ. ಚಲನಶೀಲತೆಯೂ ಇಲ್ಲ ಎಂದು ಅವರು ತಿಳಿಸಿದರು.

ನಮ್ಮ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಬೇರೆ ಪಕ್ಷಗಳ ನಡವಳಿಕೆಯಿಂದ ಜನರು ಬೇಸತ್ತಿದ್ದಾರೆ. ವಿರೋಧ ಪಕ್ಷಗಳು ಜನರ ವಿಶ್ವಾಸ ಕಳೆದುಕೊಂಡಿವೆ. ಇದು ಮುಂದಿನ ದಿನಗಳಲ್ಲೂ ಸ್ಪಷ್ಟಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಬಲ ಕೇಂದ್ರ, ರಾಜ್ಯಗಳಿಂದ ಉತ್ತಮ ಆಡಳಿತ ಕೊಡಲು ಸಾಧ್ಯವಿದೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ರಾಜ್ಯ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಾವು ಹೆಚ್ಚಿನ ನಂಬಿಕೆ ಇಟ್ಟಿದ್ದೇವೆ ಎಂದು ಅವರು ತಿಳಿಸಿದರು.

Advertisement

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಕಳೆದಿದೆ. 30-32 ಸೀಟುಗಳಿದ್ದ ಪಕ್ಷಕ್ಕೆ ಅಧಿಕಾರ ಕೊಟ್ಟ ಪಕ್ಷ ಕಾಂಗ್ರೆಸ್. ಸರಕಾರ ಜನ ಮನ್ನಣೆಯಿಂದ ಆಗಬೇಕು. ಜನಮನ್ನಣೆ, ಚುನಾವಣಾ ಫಲಿತಾಂಶ ಧಿಕ್ಕರಿಸಿ, ವಾಮಮಾರ್ಗದ ಸರಕಾರ ಪಾಪದ ನೆಲೆಗಟ್ಟಿನಿಂದ ಕುಸಿದು ಬಿತ್ತು ಎಂದು ವಿವರಿಸಿದರು.

ಇದನ್ನೂ ಓದಿ:ನನ್ನ ಆಟದಿಂದ ನನಗೆ ಸಮಾಧಾನವಾಗಿದೆ: ಲಕ್ನೋ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್

ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ರಂಗದಲ್ಲಿ ರಾಜ್ಯವು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿದೆ. ಹಿಂದೆ ಕಾಂಗ್ರೆಸ್‍ನ 5 ವರ್ಷದ ದುರಾಡಳಿತ, ಭ್ರಷ್ಟಾಚಾರ, ಹಗರಣಗಳನ್ನು ಜನರು ಮರೆತಿಲ್ಲ. ಸಣ್ಣ ನೀರಾವರಿ ಇಲಾಖೆಯಲ್ಲೂ ಶೇ 100ರಷ್ಟು ಭ್ರಷ್ಟಾಚಾರ ನಡೆದಿತ್ತು ಎಂದು ತಿಳಿಸಿದರು.

ಒಂದೇ ದಿನದಲ್ಲಿ 36 ಸಾವಿರ ಬೋರ್‍ವೆಲ್ ಕೊರೆಸಿದ ಹಗರಣ ನಡೆದಿದೆ. ದಿಂಬು- ಹಾಸಿಗೆ ಖರೀದಿ, ಪೊಲೀಸ್ ನೇಮಕಾತಿಯಲ್ಲೂ ಕಾಂಗ್ರೆಸ್ ಅವಧಿಯಲ್ಲಿ ಹಗರಣ ನಡೆದಿತ್ತು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ವಿಚಾರ ಮಾತನಾಡುವ ನೈತಿಕತೆ ಕಳೆದುಕೊಂಡಿದೆ. ಪಿಎಫ್‍ಐ ದೇಶದ್ರೋಹಿ ಸಂಘಟನೆ ಮೇಲಿದ್ದ ಕೇಸು ರದ್ದತಿ ಮಾಡಿದ್ದ ಕಾಂಗ್ರೆಸ್ ಸರಕಾರವು ತಮ್ಮ ಶಾಸಕರ ಮನೆಗೆ ಬೆಂಕಿ ಹಾಕಿದರೂ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

50 ಕೋಟಿಗಿಂತ ಹೆಚ್ಚಿನ ಕಾಮಗಾರಿಗೆ ಸಂಬಂಧಿಸಿ ನ್ಯಾಯಾಧೀಶರ ನೇತೃತ್ವದ ವಿಶೇಷ ಸಮಿತಿ ರಚಿಸಲಾಗಿದೆ. ನೇರ ಬೆನಿಫಿಟ್ ಸ್ಕೀಂ ಜಾರಿ ಮಾಡಲಾಗಿದೆ. 31 ಲಕ್ಷ ರೈತರಿಗೆ ಸಾಲ ಕೊಡಲಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡಲಾಗಿದೆ. ಸಾಮಾಜಿಕ ನ್ಯಾಯ ಕೊಡಲು 100 ಎಸ್ಸಿ/ ಎಸ್‍ಟಿ ಹಾಸ್ಟೆಲ್ ತೆರೆಯಲಾಗುತ್ತಿದೆ ಎಂದು ತಿಳಿಸಿದರು.

ಅರ್ಹರಿಗೆ ಉಚಿತ ಕರೆಂಟ್ ಕೊಡಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದಿದ್ದೇವೆ. ಮಹಿಳೆಯರು, ಯುವಕರಿಗೆ ವಿಶೇಷ ಕಾರ್ಯಕ್ರಮ ಆರಂಭಿಸಲಾಗಿದೆ. 5 ಲಕ್ಷ ಮಹಿಳೆಯರು, 5 ಲಕ್ಷ ಯುವಕರಿಗೆ ಉದ್ಯೋಗ ಲಭಿಸಲಿದೆ ಎಂದರು.

8,101 ಶಾಲಾ ಕೊಠಡಿ ನಿರ್ಮಾಣ, 100 ಪಿಎಚ್‍ಸಿ ಗಳ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹೊಸ ಹೈಸ್ಕೂಲ್ ತೆರೆಯುತ್ತಿದ್ದು, ಶಿಕ್ಷಣ- ಆರೋಗ್ಯ ಸೇರಿ ಎಲ್ಲ ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಗರಿಷ್ಠ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಅನುದಾನವನ್ನು 1500 ಕೋಟಿಯಿಂದ 3 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ದಕ್ಷಿಣ ಕರ್ನಾಟಕ, ಕರಾವಳಿ ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹತ್ತು ಹಲವು ಯೋಜನೆ ರೂಪಿಸಲಾಗಿದೆ. ದಾವಣಗೆರೆ, ಹಾಸನ ಮತ್ತಿತರ ಕಡೆ ವಿಮಾನ ನಿಲ್ದಾಣ ಕಾಮಗಾರಿ ವೇಗವಾಗಿ ನಡೆದಿದೆ. ಕೈಗಾರಿಕೀಕರಣ ಭರದಿಂದ ಸಾಗಿದೆ. ಶೇ 38ರಷ್ಟು ಎಫ್‍ಡಿಐ ಕರ್ನಾಟಕಕ್ಕೆ ಬರುತ್ತಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next