Advertisement

ಬಿಜೆಪಿಯಿಂದ ವಿಜಯಪುರ ಜಿಲ್ಲೆಯ ಸಂಪೂರ್ಣ ನಿರ್ಲಕ್ಷ : ಪ್ರಕಾಶ್ ರಾಠೋಡ್ ಕಿಡಿ

11:51 AM Apr 04, 2022 | Team Udayavani |

ವಿಜಯಪುರ: ಕಾಂಗ್ರೆಸ್ ಸರ್ಕಾರ ಇದ್ದಾಗ ಅಭಿವೃದ್ಧಿ ವಿಷಯದಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ಬಿಜೆಪಿ ಸರ್ಕಾರ ಧಾರ್ಮಿಕ ಭಾವನೆ ಕೆರಳಿಸಿ ರಾಜ್ಯದಲ್ಲಿ ಅಭಿವೃದ್ಧಿ ಹಿನ್ನಡೆ ಅನುಭವಿಸುವಂತೆ ಮಾಡಿದ್ದು, ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡದೇ ಬೇರೆಡೆ ಹೊರಟಿದ್ದಾರೆ ಎಂದು ಮೇಲ್ಮನೆ ವಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ್ ಆರೋಪಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಗಂಭಿರ ಹಾಗೂ ಜ್ವಲಂತ‌ ಸಮಸ್ಯೆಗಳಿದ್ದರೂ ಹಿಜಾಬ್, ಹಲಾಲ್-ಜಟ್ಕಾ ಮಾಂಸದಂಥಹ ವಿಷಯಗಳನ್ನು ಮುನ್ನೆಲೆಗೆ ತಂದು ಅಭಿವೃದ್ಧಿ ವಿಷಯವನ್ನು ಕಡೆಗಣಿಸಿದೆ.ಪ್ರಗತಿ ವಿರೋಧಿ ಬಿಜೆಪಿ ಸರ್ಕಾರ ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಹರಿ ಹಾಯ್ದರು.

ಸಿ.ಎಂ.ಇಬ್ರಾಹಿಂ ಅವರು ಮೇಲ್ಮನೆ ವಿಪಕ್ಷ ನಾಯಕ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನೂ ನೀಡಿತ್ತು.‌ ಆದರೂ ಅಧಿಕಾರದ ಆಸೆಯ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಿಟ್ಟಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರದಿಂದ ವಿಜಯಪುರ ಜಿಲ್ಲೆಯ ಸಂಪೂರ್ಣ ನಿರ್ಲಕ್ಷ ಮಾಡಲಾಗಿದೆ. ಕೇಂದ್ರದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡದೇ ಮೋದಿ ಸರ್ಕಾರ, ಜಿಲ್ಲೆಯನ್ನು ಅಲಕ್ಷ್ಯ ಮಾಡಿದೆ ಎಂದು ದೂರಿದರು.

ರಾಜ್ಯದಲ್ಲಿ ನಮ್ಮ ಸರ್ಕಾರಇದ್ದಾಗ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ ಅವರಿಗೆ ಸಚಿವ ಸ್ಥಾನ, ಡಾ.ಎಂ.ಎಸ್.ಭಾಗವಾನ್ ಸರ್ಕಾರದ ರಾಜಕೀಯ ಕಾರ್ಯದರ್ಶಿ, ಯಶವಂತ್ರಾಯ ಗೌಡ ಅವರಿಗೆ ನಿಗಮ‌-ಮಂಡಳಿ ಅಧ್ಯಕ್ಷ ಸ್ಥಾನ ನೀಡಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನವನ್ನೂ ನೀಡದೇ ನಮ್ಮ ಜಿಲ್ಲೆಯನ್ನು ಕಡೆಗಣಿಸಿದೆ.

Advertisement

ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತ ಗ್ರಾಮಗಳಿಗೆ ಕುಡಿಯುವ ನೀರು, ಶಾಲೆ, ಕಾಲೇಜುಗಳಿಲ್ಲ, 524 ಮೀ.ಗೆ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ ಗೇಟ ಅಳವಡಿಸಬೇಕಿದ್ದರೂ 521 ಮೀ. ಸಮೀಕ್ಷೆ ನಡೆಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದುವರೆ ಲಕ್ಷ ಕೋಟಿ ನೀಡುವ ಭರವಸೆ ಈಡೇರಿಸಿಲ್ಲ. ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹರಿಹಾಯ್ದರು.

ಮತ್ಸ್ಯ ಸಂಪದ ಯೋಜನೆಯಲ್ಲಿಒಳನಾಡು ಮೀನುಗಾರಿಕೆ ಬಲಪಡಿಸಲು ಸಾಕಷ್ಟು ಅವಕಾಶಗಳಿವೆ. ಆದರೂ ಒಳನಾಡು ವಲಯದ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ ಮಾಡಿದೆ ಎಂದು ಆರೋಪಿಸಿದರು.

ಗರಿಷ್ಠ ಸ್ವಾದ ಹೊಂದಿರುವ ಕಾಟ್ಲಾ ಮೀನು ಸೇರಿದಂತೆ ಒಳನಾಡು ಮೀನುಗಾರಿಕೆಗೆ ವಿಪುಲ ಅವಕಾಶವಿದೆ. ಆದರೆ ನದಿ, ಜಲಾಶಯಗಳ ಜಲ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಕರಾವಳಿ ಮೀನುಗಾರಿಕೆಗೆ ನೀಡಿದ ಆದ್ಯತೆಯನ್ನು ಒಳನಾಡು ಮೀನುಗಾರಿಕೆ ಬಲವರ್ಧನೆಗೆ ಸಬ್ಸಿಡಿ, ವಿಶೇಷ ಆದ್ಯತೆ ನೀಡುವ ವಿಷಯದಲ್ಲಿ ಸರ್ಕಾರ ನಿರ್ಲಕ್ಷ ತೋರಿದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next