ದಾವಣಗೆರೆ: ತಾಕತ್ತಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವಿ.ವಿಜಯೇಂದ್ರರನ್ನು ಕೆಳಗಿಳಿಸಿ ನೋಡಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಹಿರಿಯ ಶಾಸಕರಾದ ಬಸನ ಗೌಡಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ಅವರಿಗೆ ರವಿವಾರ(ನ3) ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದು ಕೇಂದ್ರದ ನಾಯಕರು. ವಿಜಯೇಂದ್ರ ಅಧ್ಯಕ್ಷರಾದ ನಂತರ ಬಿಜೆಪಿಗೆ ಹೊಸ ರೂಪ ಬಂದಿದೆ. ವಿಜಯೇಂದ್ರ ನಾಯಕತ್ವದಲ್ಲಿ ಪಕ್ಷ ಸಂಘಟನೆ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಯಾಗಿ, ಜೆಡಿಎಸ್‌ಗೆ ಹೋಗಿದ್ದರು. ಅಲ್ಲಿ ಟಿಪ್ಪು ಸುಲ್ತಾನ್ ವೇಷ ಹಾಕಿಕೊಂಡು, ಖಡ್ಗ ಹಿಡಿದಿದ್ದನ್ನೇ ಯತ್ನಾಳ್ ಮರೆತಿರಬೇಕು. ಹಿಂದು ಹುಲಿ ಅಂತಾ ತಮಗೆ ತಾವೇ ಲೇಬಲ್ ಹಾಕಿಕೊಂಡಿದ್ದಾರೆ. ಇಂತಹವರಿಗೆ ತಾಕತ್ತಿದ್ದರೆ ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಯತ್ನಾಳ್ ಅವರನ್ನು ಸ್ಟಾರ್ ಮಾಡಿದ್ದೇ ಯಡಿಯೂರಪ್ಪ ಅನ್ನೋದೆ ಮರೆತಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಅಂತಾ ಯತ್ನಾಳ್ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಬಿಜೆಪಿ ಗೆದ್ದರೆ ವಿಜಯೇಂದ್ರಗೆ ಹೆಸರು ಬರುತ್ತದೆಂದು ಕಾಂಗ್ರೆಸ್ ಜತೆಗೆ ಶಾಮೀಲಾಗಿ, ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉಪ ಚುನಾವಣೆ ಮುಗಿದ ಬಳಿಕ ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರು ಸೇರಿ, ಸಭೆ ಮಾಡುತ್ತೇವೆ. ಜಿಲ್ಲಾ ಮಟ್ಟದ ಎಲ್ಲಾ ನಾಯಕರ ಸಭೆಗಳನ್ನೂ ಮಾಡುತ್ತೇವೆ. ಕೇಂದ್ರದ ನಾಯಕರನ್ನು ನಾವೂ ಭೇಟಿ ಮಾಡುತ್ತೇವೆ. ವಿಜಯೇಂದ್ರ, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ಅಂತಹವರಿಗೆ ಮುಂದಿನ ದಿನಗಳಲ್ಲಿ ನಾವೂ ಉತ್ತರ ನೀಡುತ್ತೇವೆ ಎಂದು ಗುಡುಗಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವಾಗಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇನ್ನು ಮುಂದೆ ಮಾತನಾಡಿದರೆ ಪೊರಕೆ ಸೇವೆ ಮಾಡುವುದಕ್ಕೆ ಹೆಣ್ಣು ಮಕ್ಕಳು ಮುಂದಾಗಿದ್ದಾರೆ ಎಂದು ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಎಚ್ಚರಿಸಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಮಾತನಾಡಲು ಯತ್ನಾಳ್‌ಗೆ ನೈತಿಕತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅವರು ಹಾಗೆಯೇ ಮಾತನಾಡುತ್ತಿದ್ದರೆ ನಿಮಗೆ ಪೊರಕೆ ಸೇವೆ, ಒನಕೆ ಸೇವೆಯನ್ನು ಮಾಡುವುದಕ್ಕೂ ಮಹಿಳೆಯರು ಸಿದ್ಧವಾಗಿದ್ದಾರೆ ಎಂದರು.
ಯಡಿಯೂರಪ್ಪನವರ ಮನೆಯಲ್ಲಿ ತಿಂದು, ಅದೇ ಯಡಿಯೂರಪ್ಪನವರ ಮನೆಯ ಗಳ ಎಣಿಸುತ್ತೀರಾ. ತಿಂದ ಮನೆಯಲ್ಲಿ ಗಳ ಎಣಿಸೋದು ಅಂದರೆ ಇದೇನಾ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.