Advertisement
ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಈಗಾಗಲೇ ನೈತಿಕ ಹೊಣೆ ಹೊತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೌನಕ್ಕೆ ಶರಣಾಗಿದ್ದಾರೆ. ಆದರೆ ಕರ್ನಾಟಕದ ಸೋಲು ಈ ನಾಲ್ವರು ನಾಯಕರಿಗಿಂತಲೂ ಹೆಚ್ಚಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಮೇಜ್‌ಗೆ ಭಂಗ ತಂದಿದೆ. ವೈಯಕ್ತಿಕ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಪ್ರಚಾರ ನಡೆಸಿದರೂ ರಾಜ್ಯ ನಾಯಕರ “ಸ್ವಾರ್ಥ’ ಪಕ್ಷವನ್ನು ಸೋಲಿನ ಪ್ರಪಾತಕ್ಕೆ ನೂಕಿದೆ ಎಂದು ಪರಿಗಣಿಸಿರುವ ಬಿಜೆಪಿ ವರಿಷ್ಠರು ಆತ್ಮಾವಲೋಕನದ ನೆವಕ್ಕೂ ರಾಜ್ಯ ನಾಯಕರನ್ನು ಕರೆಸಿ ಚರ್ಚೆ ನಡೆಸಿಲ್ಲ.
Related Articles
Advertisement
ಪ್ರತಿಪಕ್ಷ ಸ್ಥಾನಕ್ಕೆ ಯತ್ನಾಳ್, ಬೆಲ್ಲದ್ ಹೆಸರು ಮುಂಚೂಣಿ: ಪ್ರತಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಸೇರಿದವರಿಗೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ಹೆಸರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಾತಿ ಸಮೀಕರಣ ಆಧರಿಸಿಯೇ ಹೆಸರನ್ನು ಅಂತಿಮಗೊಳಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಆದರೆ ವರಿಷ್ಠರು ಆಯ್ಕೆ ಮಾಡಿದ ಕೆಲ ವ್ಯಕ್ತಿಗಳು ಈ ಜವಾಬ್ದಾರಿ ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಾನೇ ಅಧ್ಯಕ್ಷನಾಗುತ್ತೇನೆಂದು ಅತಿ ಉತ್ಸಾಹ ತೋರುವವರ ಬಗ್ಗೆ ವರಿಷ್ಠರಿಗೆ ಒಲವಿಲ್ಲವಾಗಿದೆ.
ಹಿಂದುಳಿದ-ಲಿಂಗಾಯತ ಸೂತ್ರ ಮುನ್ನೆಲೆಗೆ?
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಲಭಿಸಿಲ್ಲ. ಹೀಗಾಗಿ ಒಕ್ಕಲಿಗರಿಗೆ ಮಣೆ ಹಾಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಉತ್ತರ ಭಾರತದ ರೀತಿಯಲ್ಲಿ ಹಿಂದುಳಿದ ವರ್ಗದ ಜತೆಗೆ ಇನ್ನೊಂದು ಪ್ರಬಲ ಸಮುದಾಯದ ಕಾಂಬಿನೇಷನ್ ವರಿಷ್ಠರ ದೃಷ್ಟಿಯಲ್ಲಿ ಕಾರ್ಯಸಾಧು ಯೋಜನೆಯಾಗಿ ಕಾಣುತ್ತಿದೆ. ಕರ್ನಾಟಕದಲ್ಲಿ ಕುರುಬ ಸಮುದಾಯವನ್ನು ಹೊರತುಪಡಿಸಿ ಇತರೆ ಹಿಂದುಳಿದ ವರ್ಗ ಬಿಜೆಪಿಯ ಜತೆಗೆ ಭದ್ರವಾಗಿ ನಿಂತಿದೆ. ಪ್ರತಿ ಕ್ಷೇತ್ರದಲ್ಲೂ ಸಂಖ್ಯಾ ದೃಷ್ಟಿಯಿಂದ ಸಣ್ಣದಾದರೂ ಫಲಿತಾಂಶದ ದೃಷ್ಟಿಯಿಂದ ಮಹತ್ವದ್ದೆನಿಸುವ ಈ ವರ್ಗವನ್ನು “ಏಕಛತ್ರದ’ ಅಡಿಯಲ್ಲಿ ಒಗ್ಗೂಡಿಸಬೇಕೆಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.
ಈ ಹಿಂದೆ ಬ್ರಾಹ್ಮಣ- ಲಿಂಗಾಯತ ಪಕ್ಷ ಎಂದು ಬ್ರ್ಯಾಂಡ್ ಆಗಿದ್ದ ಬಿಜೆಪಿ ಜತೆಗೆ ಹಿಂದುಳಿದ ವರ್ಗದ ನಾಯಕರು ಕೈ ಜೋಡಿಸಿದ ಬಳಿಕವೇ ಮತಬ್ಯಾಂಕ್ ವಿಸ್ತಾರವಾಗಿದೆ. ಆದರೆ ಈಶ್ವರಪ್ಪ ಅವರನ್ನು ಹೊರತುಪಡಿಸಿದರೆ ಬಿಜೆಪಿಯಲ್ಲಿ ಹಿಂದುಳಿದ ವರ್ಗದ ನಾಯಕರಿಗೆ ಇದುವರೆಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನ ನೀಡಿಲ್ಲ. ಈ ವಿಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ವರಿಷ್ಠರು ಕಳೆದ ಚುನಾವಣೆಯಲ್ಲಿ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಟಿಕೆಟ್ ನೀಡಿದ್ದರು. ಮುಂದಿನ ಚುನಾವಣೆಗೆ ಪಕ್ಷ ಸಂಘಟಿಸುವುದಕ್ಕೂ “ಹಿಂದುಳಿದ-ಲಿಂಗಾಯತ’ ಸೂತ್ರವನ್ನು ಮುನ್ನೆಲೆಗೆ ತರಲು ಚಿಂತನೆ ನಡೆಯುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರಾಘವೇಂದ್ರ ಭಟ್