Advertisement

ರಾಷ್ಟ್ರಪತಿ ಹುದ್ದೆಯಲ್ಲಿ ಜಾತಿ ನೋಡಿ ಬಿಜೆಪಿ ಸಂವಿಧಾನಕ್ಕೆ ಅಗೌರವ ತೋರಿದೆ: ಮಹಾದೇವಪ್ಪ

12:06 PM Jun 24, 2022 | Team Udayavani |

ಮೈಸೂರು: ಪ್ರಧಾನಿ ಹುದ್ದೆ, ರಾಷ್ಟ್ರಪತಿ ಹುದ್ದೆ, ಮುಖ್ಯಮಂತ್ರಿ ಹುದ್ದೆಯನ್ನು ಜಾತಿಯಿಂದ ನೋಡುವುದೇ ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ರೌಪದಿ ಮುರ್ಮು ಅವರು ಬಿಜೆಪಿಯಲ್ಲಿ ಹಲವು ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಜಾತಿ ನೋಡಿ ಅವರಿಗೆ ಸ್ಥಾನ ಕೊಡುವುದಾದರೆ ಅದು ತಪ್ಪು. ಅವರ ಕಾರ್ಯ ವೈಖರಿ ನೋಡಿ ಸ್ಥಾನ ಕೊಡಬೇಕು. ಇದು ಸಾಮಾಜಿಕ ನ್ಯಾಯದ ಸಂಕೇತವಲ್ಲ. ರಾಷ್ಟ್ರಪತಿ ಹುದ್ದೆಯಲ್ಲೂ ಜಾತಿ ನಮೂದಿಸಿದ ಬಿಜೆಪಿ ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂದರು.

ಇಲ್ಲೇ ಸಿಎಂ ಆಗು: ಮತ್ತೆ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ ಸಚಿವ ಉಮೇಶ್ ಕತ್ತಿ ಬಗ್ಗೆ ಮಾತನಾಡಿದ ಅವರು, ಕತ್ತಿ ನನಗೆ ಒಳ್ಳೆಯ ಸ್ನೇಹಿತ. ಆದರೆ ಅವನೊಬ್ಬ ಬುದ್ದಿ ಇಲ್ಲದ ಅವಿವೇಕಿ. ಅರಣ್ಯ ಇಲಾಖೆಯಂತ ಬಹುಮುಖ್ಯ ಖಾತೆ ಇದ್ದರೂ ಕೆಲಸ ಇಲ್ಲದಂತೆ ಇದ್ದಾನೆ. ಕತ್ತಿ ಮುಖ್ಯಮಂತ್ರಿ ಆಗುವ ಆಸೆ ಇದ್ದರೆ ಇಲ್ಲೇ ಆಗಲಿ. ಅದಕ್ಯಾಕೆ ಪ್ರತ್ಯೇಕ ರಾಜ್ಯ ಬೇಕು. ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿಲ್ಲವೆಂದರೆ ಅದಕ್ಕೆ ಹೊಣೆ ಯಾರು?. ಅವತ್ತಿನಿಂದ ಅಲ್ಲಿ ಅಧಿಕಾರದಲ್ಲಿ ಇರುವವರು ನೀವೆ ತಾನೆ. ಏನು ಆಗಿದೆ, ಏನು ಆಗಿಲ್ಲ ಎಂಬ ಪಟ್ಟಿ ನಿನ್ನ ಬಳಿಯೇ ಇರುತ್ತದೆ ನೋಡಿಕೋ ಎಂದರು.

ಇದನ್ನೂ ಓದಿ:ದ್ರೌಪದಿ ಮುರ್ಮು ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ ಸಿಎಂ ಬೊಮ್ಮಾಯಿ

ಲಕ್ಷಾಂತರ ಜನರ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ಸೃಷ್ಠಿಯಾಗಿದೆ. ಇದನ್ನು ಪದೇಪದೇ ಒಡೆಯುವ ಮಾತನಾಡಬೇಡಿ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ಇಂತಹ ಬೇಜವಾಬ್ದಾರಿ ಕೂಗು ಶುರು ಮಾಡುತ್ತಾರೆ ಎಂದು ಎಚ್.ಸಿ.ಮಹಾದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.

Advertisement

ಏನು ಚರ್ಚೆ?: ಮೈಸೂರಿನ ಅಭಿವೃದ್ಧಿ ಚರ್ಚೆಗೆ ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಬರಲಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ಮಾಡಿರುವ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿದೆ. ಏನೂ ಕೆಲಸ ಮಾಡದೇ ಬರೀ ಬೊಗಳೆ ಬಿಟ್ಟುಕೊಂಡು ಅವರು ಓಡಾಡುತ್ತಿದ್ದಾರೆ. ಬರಿ ಬೊಗಳೆ ಬಿಟ್ಟು ಓಡಾಡುವವರ ಜೊತೆ ಏನು ಚರ್ಚೆ ಮಾಡುವುದು. ಅವರು ಏನಾದರೂ ಅಭಿವೃದ್ಧಿ ಮಾಡಿದ್ದರೆ ತಾನೆ ಚರ್ಚೆ ಮಾಡಲು ಸಾಧ್ಯ. ಸುಮ್ಮನೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕೂತಿದ್ದಾರೆ. ನಾವು ಜಿಲ್ಲಾಸ್ಪತ್ರೆ ಕಟ್ಟದಿದ್ದರೆ ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ಎಲ್ಲಿ ಮಲಗಿಸುತ್ತಿದ್ದರು. ಇಂತಹ ನೂರು‌ ಕೆಲಸ ಮಾಡಿದ್ದೇವೆ ಎಂದರು.

ಜನಾಭಿಪ್ರಾಯಕ್ಕೆ ಮನ್ನಣೆಯಿಲ್ಲ: ಪರಿಷ್ಕೃತ ಪಠ್ಯಕ್ರಮ ವಾಪಸ್ಸು ಪಡೆಯುವುದಿಲ್ಲವೆಂಬ ಸರ್ಕಾರದ ನಿಲುವಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಚ್ ಸಿ ಮಹಾದೇವಪ್ಪ, ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನಾಭಿಪ್ರಾಯಕ್ಕೆ ಈ ಸರ್ಕಾರ ಯಾವತ್ತೂ ಮನ್ನಣೆ ನೀಡಿಲ್ಲ. ಇದು ಕೋಮುವಾದದ ಅಫೀಮನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದು ಇವರ ಉದ್ದೇಶ. ಇದಕ್ಕಾಗಿ ಯಾರ ಮಾತನ್ನೂ ಕೇಳುತ್ತಿಲ್ಲ. ಈ ಸರ್ಕಾರಕ್ಕೆ ಅಂಬೇಡ್ಕರ್, ಬಸವಣ್ಣ, ಕುವೆಂಪು, ಕನಕದಾಸರು ಯಾರ ಮೇಲೂ ಗೌರವ ಇಲ್ಲ, ಇದು ಪಠ್ಯಪರಿಷ್ಕರಣೆಯ ಮೂಲಕ ಮತ್ತೆ ಸಾಬೀತಾಗಿದೆ. ಬರಗೂರು ಸಮಿತಿ ತಪ್ಪು ಮಾಡಿಲ್ವಾ ಎಂದು ಇವರು ಈಗ ಹೇಳುವುದು ಸಮರ್ಥನೀಯವಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next