Advertisement

ಹಿಂದುಳಿದ ವರ್ಗಗಳಿಗೆ ಬಿಜೆಪಿ ಸರಕಾರದ ಅನುದಾನ: ನರೇಂದ್ರ ಬಾಬು ಧನ್ಯವಾದ

08:08 PM May 05, 2022 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳ ಸಮಾಜದ ಮುಖಂಡರು, ಮಠ ಮಾನ್ಯಗಳು, ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸುವ ಘೋಷಣೆಯನ್ನು ಬಜೆಟ್ ಮೂಲಕ ಮಾಡಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ  ನೆ.ಲ.ನರೇಂದ್ರ ಬಾಬು ಅವರು ತಿಳಿಸಿದರು.

Advertisement

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳು ಮುಖ್ಯವಾಹಿನಿಗೆ ಬರುವ ದೃಷ್ಟಿಯಿಂದ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. 65 ಹಿಂದುಳಿದ ಮತ್ತು ದಲಿತ ಮಠಗಳಿಗೆ 190 ಕೋಟಿ ಮೊತ್ತವನ್ನು ಬಿಜೆಪಿ ಸರಕಾರ ಮಂಜೂರು ಮಾಡಿದೆ. ಇದು ಸ್ವಾಗತಾರ್ಹ ಎಂದರು.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ನೀಟ್, ಸೈನಿಕ್ ಶಾಲೆ, ಸೆಂಟ್ರಲ್ ಸ್ಕೂಲ್, ಐಐಟಿ, ಐಐಎಂ ಮೊದಲಾದ ಕಡೆ 27 ಶೇಕಡಾ ಮೀಸಲಾತಿ ಕೊಟ್ಟಿದ್ದಾರೆ. ಹಿಂದುಳಿದ ವರ್ಗಗಳ 27 ಜನರನ್ನು ಸಚಿವರನ್ನಾಗಿ ಮಾಡಿದ್ದಾರೆ. ಹಿಂದುಳಿದ ವರ್ಗಗಳಿಗೆ ಸಾಂವಿಧಾನಿಕ ನೆಲೆಗಟ್ಟು ನೀಡಿದ್ದಾರೆ. ಅತಿ ಹಿಂದುಳಿದ ಜಾತಿಗಳಿಗೆ ಸಂಬಂಧಿಸಿ ಆಯೋಗ ರಚಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಕನಕದಾಸರ ಹೆಸರಿನ 50 ಹಾಸ್ಟೆಲ್‍ಗಳು ಬಾಡಿಗೆ ಕಟ್ಟಡದಲ್ಲಿದ್ದು, ಅವುಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. 1000 ಜನ ವಿದ್ಯಾರ್ಥಿಗಳ ವಸತಿಯುತ ಶಾಲೆ ಮಾಡಲು ಸರಕಾರ ಮುಂದಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆ ಮತ್ತು ನಾಲ್ಕು ಜಿಲ್ಲೆಗಳಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆ ಆರಂಭಿಸಲು ತೀರ್ಮಾನಿಸಿದೆ. ಮಾಳಿ ಸಮಾಜ, ತಿಗಳ ಸಮಾಜ, ಈಡಿಗ, ಸಿಂಪಿ, ಮಾಲಗಾರ, ಕುಂಬಾರ, ಯಾದವ, ದೇವಾಡಿಗ, ಬಲಜಿಗ, ಪಿಂಜಾರ ಮೊದಲಾದ ಸಮಾಜಗಳಿಗೆ 400 ಕೋಟಿ ಮೀಸಲಿಟ್ಟಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗದಂತೆ ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಿರುವುದು ಸ್ವಾಗತಾರ್ಹ. ಮುಂದಿನ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದ ಅವರು, ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಬಾಬು ಹಾಗೂ ವಿವೇಕಾನಂದ ಡಬ್ಬಿ ಅವರು ಬೀದರ್ ಜಿಲ್ಲೆಯಿಂದ ಪ್ರವಾಸ ಆರಂಭಿಸಿದ್ದಾರೆ. ರಾಜ್ಯದ ಎಲ್ಲ 312 ಮಂಡಲಗಳಿಗೂ ಅವರು ಭೇಟಿ ಕೊಡುತ್ತಿದ್ದಾರೆ ಎಂದರು.

Advertisement

ಪ್ರತಿ ಮಂಡಲಗಳಲ್ಲಿ 8 ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಜಿಲ್ಲೆಗಳಲ್ಲಿ 10 ಜನರ ಸಮಿತಿ ರಚಿಸಲಾಗಿದೆ. ಈ ಸಮಿತಿಗಳಲ್ಲಿ ಇಬ್ಬರು ಮಹಿಳೆಯರಿಗೆ ಪ್ರಾತಿನಿಧ್ಯತೆ ಕೊಡಲಾಗಿದೆ ಎಂದು ವಿವರಿಸಿದರು.

ಹಿಂದುಳಿದ ವರ್ಗಗಳ ವಕೀಲರ ಸಮಾವೇಶ ಏರ್ಪಡಿಸಲು ತೀರ್ಮಾನಿಸಲಾಗಿದೆ. 2ಎ ಅಡಿ ಬರುವ ಸುಮಾರು 200 ಜಾತಿಯ ಪ್ರಮುಖರ ಸಮಾವೇಶವನ್ನೂ ಏರ್ಪಡಿಸಲಾಗುವುದು ಎಂದರು.

ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ನೆಲೆಗಟ್ಟು ಅತ್ಯಂತ ಮುಖ್ಯ. ಹಿಂದುಳಿದ ವರ್ಗಗಳ ಪುರುಷರ, ಮಹಿಳೆಯರ ಹಾಸ್ಟೆಲ್ ಎಲ್ಲೇ ಆರಂಭಿಸಿದರೂ ನೆರವು ಕೊಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಭಾವಿ ಕೈಗಾರಿಕೋದ್ಯಮಿಗಳಿಗೆ ಬೆಂಬಲ ಕೋರಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳು ಬಿಜೆಪಿ ಜೊತೆಗೆ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪೂರಕ. ಬಿಜೆಪಿ ರಾಜ್ಯದಲ್ಲಿ 150 ಶಾಸಕ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಒಬಿಸಿ ಮತ್ತು ದಲಿತ ಮತದಾರರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next