Advertisement

ಬಿಜೆಪಿ ಸರ್ಕಾರ ಅಕ್ರಮದ ಅಂಗಡಿ ತೆರೆದಿದೆ: ಡಿಕೆಶಿ

06:04 PM May 03, 2022 | Team Udayavani |

ಬೆಂಗಳೂರು: ಬಿಜೆಪಿ ಸರ್ಕಾರ ಅಕ್ರಮದ ಅಂಗಡಿ ತೆರೆದಿದೆ. ಪಿಎಸ್‌ಐ, ಪ್ರಾಧ್ಯಾಪಕರ ನೇಮಕಾತಿ ಅಕ್ರಮ ವಿಚಾರ ಕೇವಲ ಮಲ್ಲೇಶ್ವರಂ ಅಥವಾ ಮಾಗಡಿಗೆ ಸೀಮಿತವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಯುವಕರಿಗೆ ಆಘಾತಕಾರಿ ವಿಚಾರ. ಪಿಎಸ್‌ಐ, ಲೋಕೋಪಯೋಗಿ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ನೇಮಕಾತಿ ಅಕ್ರಮ ನಡೆದಿದೆ ಎಂದು ದೂರಿದರು.

ಉದ್ಯೋಗ ವಿಚಾರದಲ್ಲಿ ಯುವಕರಿಗೆ ನ್ಯಾಯ ಎಲ್ಲಿ ಸಿಗುತ್ತದೆ. ಈ ವಿಚಾರವಾಗಿ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅನುಮಾನ ಇಲ್ಲದೆ ದೂರು ದಾಖಲಿಸಲು ಸಾಧ್ಯವೇ, ಈ ವಿಚಾರವಾಗಿ ತನಿಖೆ ಸರಿಯಾಗಿ ಆಗುತ್ತದೆಯಾ ಎಂದು ಪ್ರಶ್ನಿಸಿದರು.

ಅಕ್ರಮದ ಅಂಗಡಿ ತೆರೆದಿದ್ದ ಕಾರಣ ಜನ ಅವರ ಬಳಿ ಖರೀದಿಗೆ ಹೋಗಿದ್ದಾರೆ. ಇವರು ಅಂಗಡಿ ತೆರೆಯದಿದ್ದರೆ ಅವರು ಹೋಗುತ್ತಿದ್ದರಾ, ಅಂಗಡಿ ತೆರೆದವರು ಯಾರು, ಸಂಪರ್ಕ ಕೊಟ್ಟವರು ಯಾರು ಎಂದರು.

ಅಮಿತ್‌ ಶಾ ಅವರು ಅವರ ಪಕ್ಷದ ವಿಚಾರವಾಗಿ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಅಕ್ರಮದಲ್ಲಿ ರಾಜಕಾರಣಿಗಳು ಯಾವ ರೀತಿ ಭಾಗಿಯಾಗಿದ್ದಾರೆ, ಯಾರು ಆಸ್ತಿ ಮಾಡಿದ್ದಾರೆ, ಯಾರು ಸಾಲ ಮಾಡಿದ್ದಾರೆ, ಇವೆಲ್ಲವೂ ಬಹಿರಂಗವಾಗಬೇಕು ಅಲ್ಲವೇ ಎಂದು ಹೇಳಿದರು.

Advertisement

ಇದ್ಯಾವುದೂ ನಡೆಯದೇ ಏಕಾಏಕಿ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆಗೆ ಆದೇಶಿಸಿದರೆ ನಾವು ಸುಮ್ಮನಿರಲು ಸಾಧ್ಯವೇ. ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರು ಯಾರಿಂದ ವಸೂಲಿ ಮಾಡಿದ್ದಾರೆ ಎಂಬುದು ಬಹಿರಂಗವಾಗಬೇಕು. ಮಾಗಡಿ ಕ್ಷೇತ್ರವೊಂದರಲ್ಲಿ ಎರಡು ಕೋಟಿ ರೂ. ಅಕ್ರಮ ನಡೆದಿದ್ದು ಇದರಲ್ಲಿ ಭಾಗಿಯಾಗಿರುವ ಸಚಿವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ ಪಕ್ಷ ಇದರ ಬಗ್ಗೆ ಹೋರಾಟ ಮಾಡುತ್ತದೆ. ಈ ವಿಚಾರವಾಗಿ ಯಾವುದೇ ವೇದಿಕೆಯಲ್ಲಿ ಚರ್ಚೆ ಮಾಡಲು ನಮ್ಮ ಪಕ್ಷದ ವಕ್ತಾರರು ಸಿದ್ಧರಿದ್ದಾರೆ ಎಂದು ಹೇಳಿದರು.

ಸ್ವಚ್ಛ ಮಾಡೋದು ಹೀಗೇನಾ
ಭ್ರಷ್ಟಾಚಾರ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದರೂ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ. ವಿಚಾರಣೆಗೆ ಕರೆಸಿದ ದರ್ಶನ್‌ ಗೌಡ ಯಾವ ಹೇಳಿಕೆ ಕೊಟ್ಟಿದ್ದಾನೆ. ಆತನನ್ನು ಯಾಕೆ ಪೂರ್ಣಪ್ರಮಾಣದಲ್ಲಿ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಲಾಯಿತು. ಈ ವಿಚಾರವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ ಯಾಕೆ. ಆತನ ವಿಚಾರಣೆ ಮಾಡಿದರೆ ಸಚಿವರ ಸಂಪರ್ಕ ಬಹಿರಂಗವಾಗುತ್ತದೆ ಎಂಬ ಕಾರಣಕ್ಕೆ ಆತನನ್ನು ಬಿಟ್ಟು ಕಳುಹಿಸಲಾಗಿದೆ. ರಾಮನಗರ ಸ್ವಚ್ಛ ಮಾಡುತ್ತೇನೆ ಎಂದು ಬಂದವರು ಮಾಡಿದ ಸ್ವತ್ಛ ಇದೇನಾ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಯತ್ನಾಳ್‌ ಅವರಾಗಲಿ ಅಥವಾ ಬೇರೆ ಯಾರೇ ಮಾತನಾಡಿದರು ಅದು ನಮಗೆ ಪ್ರಮುಖ ವಿಚಾರವಲ್ಲ. ಸಮರ್ಥರು, ಅಸಮರ್ಥರು, ಯಾವ ಸೂತ್ರ ಬರುತ್ತದೆ ಎಂಬುದೂ ನಮಗೆ ಮುಖ್ಯವಲ್ಲ. ಮುಖ್ಯಮಂತ್ರಿ ಬದಲಾವಣೆ ಅವರ ಪಕ್ಷದ ವಿಚಾರ. ನಮಗೂ ಅದಕ್ಕೂ ಸಂಬಂಧವಿಲ್ಲ. ರಾಜ್ಯಕ್ಕೆ ಉತ್ತಮ ಆಡಳಿತ ಸಿಗಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಉದ್ದೇಶ. ಈ ರಾಜ್ಯ ಶಾಂತಿಯ ತೋಟವಾಗಬೇಕು, ಎಲ್ಲಾ ಧರ್ಮದವರಿಗೂ ರಕ್ಷಣೆ ಸಿಗಬೇಕು. ಸರ್ಕಾರ ಈ ಕೆಲಸ ಮಾಡಿದರೆ ಸಾಕು.
– ಡಿ.ಕೆ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next