Advertisement

ಮುಂದಿನ ಬಾರಿಯೂ ಬಿಜೆಪಿ ಸರ್ಕಾರ ನಿಶ್ಚಿತ

06:23 PM Aug 17, 2022 | Team Udayavani |

ಲಿಂಗಸುಗೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಉತ್ತಮ ಜನಪರ ಯೋಜನೆ ಜಾರಿ ಮಾಡುವ ಮೂಲಕ ಅಭಿವೃದ್ಧಿಗೆ ಶ್ರಮವಹಿಸುತ್ತಿವೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಹೆಚ್ಚಿನ ಜನತೆ ಆಶೀರ್ವಾದ ಮಾಡಲಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ವಿಜಯ ಮಹಾಂತೇಶ್ವರ ಮಠದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಹಾಗೂ ಮಾನಪ್ಪ ವಜ್ಜಲ್‌ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ-ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳ ಆಡಳಿತ ಮೆಚ್ಚಿ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ಒಂದೇ ಕುಟಂಬಕ್ಕೆ ಅಥವಾ ಒಬ್ಬ ವ್ಯಕ್ತಿ ಪೂಜೆ ಮಾಡುವ ಪಕ್ಷವಲ್ಲ, ಬಿಜೆಪಿಯಲ್ಲಿ ಪಕ್ಷಕ್ಕಿಂತ ರಾಷ್ಟ್ರವೇ ದೊಡ್ಡದು ಎಂಬ ಸಿದ್ಧಾಂತದಲ್ಲಿ ಪಕ್ಷ ಮುನ್ನಡೆಯುತ್ತಿದೆ. ಬೇರೆ ಬೇರೆ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮುಖಂಡರಿಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುತ್ತಿದೆ ಎಂದರು.

ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ಆಡಳಿತದಿಂದಾಗಿ ಇಂದು ವಿದೇಶದಲ್ಲಿ ಅವರ ಜನಪ್ರೀಯತೆ ಹೆಚ್ಚಾಗಲು ಕಾರಣವಾಗಿದೆ. 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಕರೆ ನೀಡಿರುವ ಮನೆ-ಮನೆಗೆ ತ್ರಿವರ್ಣ ಧ್ವಜ ಅಭಿಯಾನಕ್ಕೆ ಇಡೀ ದೇಶದ ಜನವೇ ಬೆಂಬಲ ನೀಡಿ ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದು ಐತಿಹಾಸಿಕ ಕೆಲಸವಾಗಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಬಿಜೆಪಿ ಸೇರ್ಪಡೆ: ಜಿ.ಪಂ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್‌, ತಾಪಂ ಮಾಜಿ ಅಧ್ಯಕ್ಷರಾದ ಬೀರಪ್ಪ ಪೂಜಾರಿ, ಬಸಣ್ಣ ನರಕಲದಿನ್ನಿ, ಮುಖಂಡ ಮುದುಕಪ್ಪ ವಕೀಲರು ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡರು.

Advertisement

ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ್‌ ಯಾದವ್‌, ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ| ಶಿವಬಸಪ್ಪ, ಮುಖಂಡರಾದ ನಾಗಪ್ಪ ವಜ್ಜಲ್‌, ಗಿರಿಮಲ್ಲನಗೌಡ ಕರಡಕಲ್‌, ಶಂಕರಗೌಡ ಬಳಗಾನೂರು, ಗೋವಿಂದ ನಾಯಕ, ಹುಲ್ಲೇಶ ಸಾಹುಕಾರ, ಜಯಶ್ರೀ ಸಕ್ರಿ, ಜೀವೆಲಪ್ಪ ನಾಯ್ಕ ಅನೇಕ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next