ದಾವಣಗೆರೆ: ಭಾರಿ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ಎರಡನೇ ಬಾರಿ ಪಾಲಿಕೆಯ ಆಡಳಿತ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಮೇಯರ್ ಆಗಿ ಎಸ್.ಟಿ. ವೀರೇಶ್, ಉಪಮೇಯರ್ ಆಗಿ ಶಿಲ್ಪ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.
ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಳೆದ ಆರು ತಿಂಗಳಿಂದ ಭಾರಿ ಪೈಪೋಟಿಯ ಪ್ರಕ್ರಿಯೆಗಳು ನಡೆದಿದ್ದವು. ಈ ಪೈಪೋಟಿ ಎಷ್ಟಿತ್ತೆಂದರೆ ಉಭಯ ಪಕ್ಷಗಳು ಸಮಮತಗಳನ್ನು ಪಡೆದು, ಲಾಟರಿ ಮೂಲಕ ಅದೃಷ್ಟ ಪರೀಕ್ಷೆಯೂ ನಡೆಯಬಹುದು ಎಂದು ಭಾವಿಸಲಾಗಿತ್ತು. ಆದರೆ, ಮಂಗಳವಾರ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಮೇಯರ್ ಆಕಾಂಕ್ಷಿ ಅಭ್ಯರ್ಥಿಯೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿದ್ದು ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿತು.
ಇದನ್ನೂ ಓದಿ : ಆತ್ಮಹತ್ಯೆಗೆ ಬ್ರೇಕ್ ಹಾಕಲು ‘ಲೋನ್ಲಿನೆಸ್ ಮಿನಿಸ್ಟರ್’ನ್ನು ಸಂಪುಟಕ್ಕೆ ಸೇರಿಸಿಕೊಂಡ ಜಪಾನ್!
ಬಿಜೆಪಿಯ 16 ಪಾಲಿಕೆ ಸದಸ್ಯರು, ನಾಲ್ವರು ಪಕ್ಷೇತರರು, ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಆರ್. ಶಂಕರ್, ಶಾಸಕ ಎಸ್.ಎ. ರವೀಂದ್ರನಾಥ್, ವಿಪ ಸದಸ್ಯರಾದ ಎನ್.ರವಿಕುಮಾರ್, ತೇಜಸ್ವಿನಿಗೌಡ, ಲೇಹರ್‌ಸಿಂಗ್, ಕೆ.ಪಿ. ನಂಜುಂಡಿ, ಹನುಮಂತ ನಿರಾಣಿ, ಎಂ. ಚಿದಾನಂದ ಸೇರಿ ಬಿಜೆಪಿ ಒಟ್ಟು 29 ಮತಗಳ ಬಲ ಪ್ರದರ್ಶಿಸಿತು. ಕಾಂಗ್ರೆಸ್‌ಗೆ 20 ಪಾಲಿಕೆ ಸದಸ್ಯರು, ಓರ್ವ ಪಕ್ಷೇತರ, ವಿಪ ಸದಸ್ಯ ಮೋಹನ್‌ಕುಮಾರ್ ಕೊಂಡಜ್ಜಿ ಸೇರಿ ಕೇವಲ 22 ಮತ ಬಲ ಪ್ರದರ್ಶಿಸಲು ಮಾತ್ರ ಸಾಧ್ಯವಾಯಿತು.