ಕೊಲ್ಕತ್ತಾ : ಸಪ್ಟೆಂಬರ್ 30 ರಂದು ನಡೆಯಲಿರುವ ಪಶ್ಚಿಮ ಬಂಗಾಳದ ಭವಾನಿ ಪುರ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಅವರು ಕಣಕ್ಕಿಳಿಯಲಿದ್ದಾರೆ.
ಇಂದು(ಸೆ.10) ಭವಾನಿಪುರ ಕ್ಷೇತ್ರದಿಂದ ಪ್ರಿಯಾಂಕಾ ಟಿಬ್ರೆವಾಲ್ ಅವರ ಸ್ಪರ್ಧೆಯನ್ನು ಅಧಿಕೃತ ವಾಗಿ ಬಿಜೆಪಿ ಪ್ರಕಟಿಸಿದೆ.
ಬಾಬುಲ್ ಸುಪ್ರಿಯೋ ಅವರ ಕಾನೂನು ಸಲಹೆಗಾರರಾಗಿದ್ದ ನ್ಯಾಯವಾದಿ ಪ್ರಿಯಾಂಕಾ ಟಿಬ್ರೆವಾಲ್, ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ಧ ಸ್ಥಾನಕ್ಕೆ ಸವಾಲು ಹಾಕುವ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಇವರು ಈ ಹಿಂದೆ ಕೋಲ್ಕತಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ 2015 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಆದರೇ, ತೃಣಮೂಲ ಕಾಂಗ್ರೆಸ್ ನ ಸ್ವಪನ್ ಸಮ್ಮದರ್ ವಿರುದ್ಧ ಸೋತಿದ್ದರು. ಆದರೇ, ಬಿಜೆಪಿ ಈಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ದೀದಿ ವಿರುದ್ಧ ಉಪ ಚುನಾವಣೆಯಲ್ಲಿ ಕಣಕ್ಕಿಳಸುತ್ತಿದೆ.
ಜುಲೈ 7, 1981 ರಂದು ಕೋಲ್ಕತ್ತಾದಲ್ಲಿ ಜನಿಸಿದ ಪ್ರಿಯಾಂಕ ತನ್ನ ಶಾಲಾ ಶಿಕ್ಷಣವನ್ನು ವೆಲ್ಯಾಂಡ್ ಗೌಲ್ಡ್ ಸ್ಮಿತ್ ಶಾಲೆಯಲ್ಲಿ ಪಡೆದರು. ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಅದರ ನಂತರ, ಅವರು 2007 ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಹಜ್ರಾ ಕಾನೂನು ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದಿದ್ದಾರೆ.
ವೃತ್ತಿಯಲ್ಲಿ ವಕಿಲೆಯಾಗಿರುವ ಪ್ರಿಯಾಂಕ, 2014 ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಪಕ್ಷದಲ್ಲಿ ಹಲವು ಜವಾಬ್ದಾರಿಯನ್ನು ನಿಭಾಯಿಸಿ ಸೈ ಎನ್ನಿಸಿಕೊಂಡ ಪ್ರಿಯಾಂಕಾ ಗೆ ಬಿಜೆಪಿ, ಯುವ ಮೋರ್ಚಾ ದ ಅಧ್ಯಕ್ಷ ಗಿರಿಯನ್ನು ಸ್ಥಾನ ಮಾಡುತ್ತದೆ. 2021, ಅವರು ಎಂಟಲ್ಲಿಯಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಟಿಎಂಸಿಯ ಸ್ವರ್ಣ ಕಮಲ್ ಸಾಹಾ ವಿರುದ್ಧ 58,257 ಮತಗಳ ಅಂತರದಿಂದ ಸೋತಿದ್ದರು.
ಇನ್ನು ಸಪ್ಟೆಂಬರ್ 30 ರಂದು ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣೆ ಆಯೋಗ ಇತ್ತೀಚೆಗೆ ತಿಳಿಸಿತ್ತು.