ಮಧುಗಿರಿ: ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಬೂತ್ ಮಟ್ಟದಲ್ಲಿ ಶಕ್ತಿಯುತವಾಗಿ ಚುನಾವಣೆ ಯಲ್ಲಿ ಗೆಲುವು ಸಾಧಿಸಬೇಕೆಂದು ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ತೆಂಗು-ನಾರು ಅಭಿ ವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜಣ್ಣ ತಿಳಿಸಿದರು.
ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಕಾರ್ಯಕರ್ತರೇ ನಾಯಕರು. ಇವರಿಂದಲೇ ಪಕ್ಷ ಅಧಿಕಾರ ಪಡೆಯುತ್ತಿದೆ. ಮಧು ಗಿರಿ 4 ತಾಲೂಕುಗಳನ್ನು ಒಳಗೊಂಡ ಜಿಲ್ಲೆಯಾಗಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ವಿಪಕ್ಷಗಳು ಈ ಜಿಲ್ಲೆಯಲ್ಲಿ ಬಿಜೆಪಿ ಎಂದಿಗೂ ಬರಲ್ಲ ಎಂದಿದ್ದರು. ಆದರೆ ಶಿರಾ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಮುಂದೆಯೂ 4 ತಾಲೂಕುಗಳಲ್ಲಿ ಬಿಜೆಪಿ ಗೆಲ್ಲಲಿದೆ. ಅದಕ್ಕಾಗಿ ಕಾರ್ಯ ಕರ್ತರು ಕೇಂದ್ರ-ರಾಜ್ಯ ಸರ್ಕಾರದ ಜನಪರ ಕಾರ್ಯ ಕ್ರಮಗಳನ್ನು ಜನರಿಗೆ ತಿಳಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿರಾ ಶಾಸಕ ರಾಜೇಶ್‌ಗೌಡ, ಎಲ್ಲರೂ ಶ್ರಮವಹಿಸಿ ಬಿಜೆಪಿಗಾಗಿ ಕೆಲಸ ಮಾಡಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನೇ 2 ಬಾರಿ ಸೋಲಿಸಿದ ಪಕ್ಷದಿಂದ ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಕಾಂಗ್ರೆಸ್ ಹೆಸರೇಳದೆ ಕುಟುಕಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ಕಾರ್ಯಕರ್ತರು ಕ್ರಿಯಾಶೀಲಾರಾಗಿ ಮಧುಗಿರಿ ಜಿಲ್ಲೆಯ 4 ಕ್ಷೇತ್ರಗಳನ್ನು ಬಿಜೆಪಿ ತೆಕ್ಕೆಗೆ ಪಡೆಯಬೇಕು. ಅಂತಹ ಕಾರ್ಯ ಚಟುವಟಿಕೆಗಳು ಈ ಕಾರ್ಯಕಾರಿಣಿಯಲ್ಲಿ ತಿಳಿಸಿಕೊಡಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಹಾಗೂ ವಿಭಾಗದ ಪ್ರಭಾರಿ ನವೀನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ನರೇಂದ್ರನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೈರಪ್ಪ, ರವಿಕುಮಾರ್, ಜಯಣ್ಣ, ರವಿ, ತಿಮ್ಮಜ್ಜ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದೀಕ್ಷಿತ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಪತಿ, ಮಧುಗಿರಿ ಮಂಡಲಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಯುವ ಮೋರ್ಚಾ ಅಧ್ಯಕ್ಷ ಆರಾಧ್ಯ, ಕಾರ್ಯಾಲಯ ಕಾರ್ಯದರ್ಶಿ ಸುರೇಶ್ ಇದ್ದರು.