ದಾಂಡೇಲಿ: ಸಚಿವ ಆರ್.ವಿ ದೇಶಪಾಂಡೆಯವರು ಈ ನಾಲ್ಕುವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ದಾಂಡೇಲಿ ತಾಲೂಕು ರಚನೆ, ವಿಟಿಯು ಕೌಶಲ್ಯಾಭಿವೃದ್ಧಿ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಹೆಗ್ಗಳಿಕೆ ದೇಶಪಾಂಡೆಯವರಿಗೆ ಸಲ್ಲಬೇಕು. ಅವರ ಏಳಿಗೆ ಸಹಿಸದ ಮಾಜಿ ಶಾಸಕ ಸುನೀಲ ಹೆಗಡೆಯವರು ಸುಳ್ಳು ಹಾಗೂ ವ್ಯರ್ಥ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಂಡೇಲಿಯಲ್ಲಿ ಜಿ ಪ್ಲಸ್ 2 ಮಾದರಿಯಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆ ಉಪಯುಕ್ತ ಕ್ರಮ ಕೈಗೊಳ್ಳಲಾಗಿದೆ. ಜಿ ಪ್ಲಸ್ 2 ಆಶ್ರಯ ಮನೆ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಆದ ಬಳಿಕವೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದ್ದಾರೆ.
ದೇಶಪಾಂಡೆಯವರ ವಿಶೇಷ ಪ್ರಯತ್ನದಿಂದ ಸುಸಜ್ಜಿತ ತಾಯಿ ಮತ್ತು ಮಗು ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ ಈ ಆಸ್ಪತ್ರೆಗೆ ವೈದ್ಯರ ಹಾಗೂ ಸಿಬ್ಬಂದಿ ನೇಮಕಾತಿಯಾಗಬೇಕಾಗಿದೆ. ಇವೆಲ್ಲವೂ ಒಂದು ದಿನದ ಕೆಲಸವಲ್ಲ. ಅವೆಲ್ಲವುಗಳನ್ನು ನಿಯಾಮವಳಿ ಪ್ರಕಾರ ಮಾಡಲಾಗುತ್ತದೆ ಎಂದರು.
ಡಿಎಸ್‌ಎಫ್‌ಎಯಲ್ಲಿ ಬಾಡಿಗೆ ಆಧಾರದಲ್ಲಿ ಎಆರ್‌ಟಿಒ ಕಚೇರಿ ತೆರೆಯಲಾಗಿದೆ. ಆದರೆ ಅದು ಶಾಶ್ವತವಾಗಿ ಅಲ್ಲ. ಇನ್ನೂ ಕೆಲವೇ ತಿಂಗಳಲ್ಲಿ ಎಆರ್‌ಟಿಒ ಕಚೇರಿ ಸ್ವಂತ ಕಟ್ಟಡದಲ್ಲಿ ಸೇವೆ ನೀಡಲಿದೆ ಎಂದು ತಂಗಳ ತಿಳಿಸಿದರು.
ದೇಶಪಾಂಡೆಯವರು ಕೈಗಾರಿಕೆಗಳ ಪ್ರಗತಿಗಾಗಿ ಮತ್ತು ಜನಪರ ಕೈಗಾರಿಕಾ ಯೋಜನೆಗಳನ್ನು ಜಾರಿಗೆ ತರುವುದಕ್ಕಾಗಿ ವಿದೇಶ ಪ್ರವಾಸ ಮಾಡಿದ್ದಾರೆಯೇ ಹೊರತು, ಅವರ ಸ್ವಾರ್ಥ ಸಾಧನೆಗಾಗಿ ಅಲ್ಲ. ದೇಶಪಾಂಡೆಯವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯಕ್ಕೆ ರೂ: 1 ಲಕ್ಷ 47 ಸಾವಿರ ಕೋಟಿ ವಿದೇಶಿ ಬಂಡವಾಳ ಹರಿದು ಬಂದಿದೆ ಎಂದು ವಿವರಿಸಿದರು.
ದಾಂಡೇಲಿ ನಗರ ಸಭೆಯ ಜಾಗವನ್ನು ಬಹುಜನರ ಬೇಡಿಕೆಯಂತೆ ಆಟೋ ನಗರ, ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ನೀಡಲಾಗಿದೆ. ವರ್ಷದೊಳಗಡೆ ಅಂಬೇವಾಡಿಯಲ್ಲಿ ಶಾಹಿ ಎಕ್ಸಪೋಟ್ಸ್ ಅವರ ಗಾರ್ಮೆಂಟ್ಸ್ ಕಾರ್ಖಾನೆ ಪ್ರಾರಂಭವಾಗಲಿದೆ ಎಂದು ತಂಗಳ ಹೇಳಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆದಿವೆ. ನುಡಿದಂತೆ ನಡೆದ ದೇಶಪಾಂಡೆಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡುವುದು ಓಟಿಗಾಗಿ ಮಾಡುವ ಗಿಮಿಕ್ ಎಂದು ಸೈಯದ ತಂಗಳ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪೂಜಾರ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಪಕ್ಷದ ವಕ್ತಾರರಾದ ಆದಂ ದೇಸೂರು, ವಿ.ಆರ್. ಹೆಗಡೆ, ಪಕ್ಷದ ಮುಖಂಡರಾದ ತಸ್ವರ ಸೌದಗಾರ, ಕರೀಂ ಅಜರೇಕರ, ಆರ್.ಪಿ.ನಾಯ್ಕ, ಎನ್.ಎಸ್.ನಾಯ್ಕ, ಎಸ್ .ಜಿ.ಕೊಪ್ಪಳ, ಫಾರುಕು, ನಗರಸಭಾ ಸದಸ್ಯರಾದ ನಂದೀಶ ಮುಂಗರವಾಡಿ, ಅಡಿವೆಪ್ಪ ಭದ್ರಕಾಳಿ ಮೊದಲಾದವರು ಉಪಸ್ಥಿತರಿದ್ದರು.