ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ರಾಜಸ್ಥಾನದ ಚಿಂತನಾ ಶಿಬಿರದಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಒಟ್ಟಿಗೆ ನಿಂತು ಎಷ್ಟೇ ಫೋಟೋಶೂಟ್ ಮಾಡಿಸಿಕೊಂಡರೂ, ಒಳ ಬೇಗುದಿ ಶಮನವಾಗುವುದಿಲ್ಲ ಎಂದು ರಾಜ್ಯ ಬಿಜೆಪಿ ಅಭಿಪ್ರಾಯ ಪಟ್ಟಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಮನಸ್ತಾಪಕ್ಕೆ ಎಷ್ಟೊಂದು ಕಾರಣಗಳಿವೆ, ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ , ವಿಧಾನಸಭೆಯ ವಿಪಕ್ಷ ಉಪ ನಾಯಕರ ಸ್ಥಾನ, ಸಿಎಂ ಅಭ್ಯರ್ಥಿ ಘೋಷಣೆ, ಎಂಎಲ್ಸಿ ಅಭ್ಯರ್ಥಿ ಹೀಗೆ ಎಲ್ಲದರಲ್ಲೂ ಮುಸುಕಿನ ಗುದ್ದಾಟ.
ಒಡೆದ ಮನೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲೆಲ್ಲಾ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಮನಸ್ತಾಪದ ಪಿಸುಮಾತು ರಾಜ್ಯಕ್ಕೆ ಕೇಳಿಸುತ್ತಿತ್ತು. ಈಗ ಅದರ ಸದ್ದು, ದೆಹಲಿವರೆಗೂ ಕೇಳಿಸುತ್ತಿದೆ. ಕೈ ಕಮಾಂಡ್ ತೇಪೆ ಹಚ್ಚುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಇವರ ಒಳಜಗಳದಿಂದಲೇ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ. ಕೈ ಹಿಡಿತಕ್ಕಾಗಿ ಕೈ ನಾಯಕರು ಕೈ ಪಾಳಯದಲ್ಲಿ ಕೈ ಕೈ ಮಿಲಾಯಿಸುತ್ತಾರೆ. ಆದರೆ, 2023 ಚುನಾವಣೆಯ ನಂತರ ಕಾಂಗ್ರೆಸ್ ಖಾಲಿ ಖಾಲಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.