Advertisement

ಬಿಜೆಪಿಗೆ ಪ್ರತಿಸ್ಪರ್ಧಿಗಳಿಲ್ಲ-ಚುನಾವಣೆ ನೆಪಕ್ಕೆ; ಮುಂದಿನ ಬಾರಿಯೂ ಮೋದಿಯೇ ಪ್ರಧಾನಿ

01:49 PM Nov 20, 2021 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗು. ಇಂತಹ ಹಡಗನ್ನು ಏರಲು ಯಾರೂ ಬಯಸುವುದಿಲ್ಲ. ಬಿಜೆಪಿಗೆ ಸ್ಪರ್ಧಿಗಳು ಇಲ್ಲ. ಚುನಾವಣೆಗಳು ಕೇವಲ ನೆಪ ಮಾತ್ರಕ್ಕೆ. ಗೆಲುವು ನಿಶ್ಚಿತವಾಗಿದ್ದು, ಎಷ್ಟು ಮತಗಳ ಅಂತರ ಎನ್ನುವುದೊಂದೇ ಬಾಕಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

Advertisement

ಶುಕ್ರವಾರ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಜನಸ್ವರಾಜ್ಯ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ ಕೇವಲ ಹಣ, ತೋಳ್ಬಲ, ಧರ್ಮ, ಜಾತಿ ರಾಜಕಾರಣದ ಮೂಲಕ ಚುನಾವಣೆ ಮಾಡಿಕೊಂಡು ಬಂದಿರುವ ಪಕ್ಷ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅಂತಹ ಕೆಟ್ಟ ಸಂಪ್ರದಾಯದ ಪಕ್ಷವನ್ನು ಸಂಪೂರ್ಣವಾಗಿ ಜನರು ತಿರಸ್ಕರಿಸಿದ್ದಾರೆ. ಇನ್ನೂ 20 ವರ್ಷ ಕಳೆದರೂ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ. ಮುಂದಿನ ಬಾರಿಯೂ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿರುತ್ತಾರೆ ಎಂದರು.

ವಿರಮಿಸದೆ ಕೆಲಸ ಮಾಡಿ: ಪಕ್ಷಕ್ಕೆ ಬಾರದ ಮತಗಳನ್ನು ಮನವೊಲಿಸುವ ಬರುವಂತೆ ಮಾಡುವವರು ನಿಜವಾದ ಕಾರ್ಯಕರ್ತರು. ಇಲ್ಲಿನ ವಿಧಾನಪರಿಷತ್ತು ಕ್ಷೇತ್ರವ ವ್ಯಾಪ್ತಿಯ 7052 ಮತಗಳ ಪೈಕಿ ಗರಿಷ್ಠ ಮತಗಳು ಬಿಜೆಪಿ ಅಭ್ಯರ್ಥಿಗೆ ಬರುವಂತೆ ಮಾಡಬೇಕು. ಚುನಾವಣೆ ಮುಗಿಯುವವರೆಗೂ ವಿರಮಿಸದೆ ಪಕ್ಷಕ್ಕೆ ಮತ ಹಾಕದವರನ್ನು ಮನವೊಲಿಸುವ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಮಹಿಳೆಯರ ಸಬಲೀಕರಣ ಆಗಬೇಕು.

ಸ್ವ ಉದ್ಯೋಗ ಹಾಗೂ ಇತರರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಕರೆ ನೀಡಿದರು. ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಪಕ್ಷ ಕಟ್ಟಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಲಿದ್ದಾರೆ. ಹೀಗಾಗಿ ಅವರನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ದೊಡ್ಡ ಸಮಾರಂಭ ಏರ್ಪಡಿಸಿ ಅಭಿನಂದನೆ ಸಲ್ಲಿಸುವ ಕೆಲಸ ಮಾಡಲಾಗುವುದು ಎಂದರು.

ಸಚಿವ ಶಂಕರ ಪಾಟೀಲ ಮುನೇಕೊಪ್ಪ ಮಾತನಾಡಿ, ಕಳಸಾ ಬಂಡೂರಿ, ಮಹದಾಯಿ ಕಾನೂನಾತ್ಮಕ ತೊಂದರೆ ಪರಿಹಾರವಾದರೆ ಕಾಮಗಾರಿ ಕೈಗೊಳ್ಳಲು ಬಿ.ಎಸ್‌.ಯಡಿಯೂರಪ್ಪ ಅವರು 1672 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ತುಪ್ಪರಿ ಹಳ್ಳದ ಸಮಸ್ಯೆಗೆ 325 ಕೋಟಿ ರೂ. ನೀಡಿದ್ದಾರೆ. ಆರು ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿರುವ ಪ್ರದೀಪ ಶೆಟ್ಟರ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

Advertisement

ವಿಧಾನಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಜಲಧಾರೆ ಹಾಗೂ ಜಲಜೀವನ ಮಿಷನ್‌, ರಸ್ತೆಗಳು ಸೇರಿದಂತೆ ಹಲವು ಯೋಜನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. 176 ಕೋಟಿ ರೂ. ವೆಚ್ಚದಲ್ಲಿ ಅಮೃತ ಯೋಜನೆ ನಡೆದಿದೆ. ವಿಧಾನಪರಿಷತ್ತು ಹಾಗೂ ವಿಧಾನಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಅಡಿಪಾಯ ಎಂದು ಹೇಳಿದರು.

ಬಿಜೆಪಿಗೆ ವಿರೋಧಿ ಅಲೆ ಶುರುವಾಗಿದೆ ಎನ್ನುವ ಆರೋಪವನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಹೇಳುತ್ತಿದ್ದಾರೆ. ಆದರೆ ತಮ್ಮ ಪಕ್ಷಕ್ಕೆ ಅನ್ವಯಿಸುತ್ತಿದೆ ಎನ್ನುವ ಸಾಮಾನ್ಯ ಜ್ಞಾನವೂ ಅವರಿಗೆ ಇಲ್ಲದಂತಾಗಿದೆ. ವಿಧಾನಪರಿಷತ್ತು 25 ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಗೆಲ್ಲಲಿದ್ದೇವೆ.
ಬಿ.ಶ್ರೀರಾಮುಲು, ಸಾರಿಗೆ ಸಚಿವ

ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮೂರು ಮಸೂದೆಗಳನ್ನು ವಾಪಸ್‌ ಪಡೆದಿರುವುದನ್ನು ಅಭಿನಂದಿಸಬೇಕು. ಸ್ವಾತಂತ್ರ್ಯ ಬಂದರೂ 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಇರಲಿಲ್ಲ. ಇದನ್ನು ಕೇಂದ್ರ ಸರಕಾರ ಮಾಡಿದೆ. ಆದಿವಾಸಿಗಳು ಹಾಗೂ ದಲಿತರ ಏಳ್ಗೆಗೆ ಹಲವು ಯೋಜನೆಗಳನ್ನು ಪ್ರಧಾನಿಗಳು ಮಾಡಿ ತೋರಿಸಿದ್ದಾರೆ. ಮೊದಲ ಹಂತದಲ್ಲಿ ಶುದ್ಧ ನೀರಿಗಾಗಿ ಕೇಂದ್ರ ಸರಕಾರ 8500 ಕೋಟಿ ರೂ. ನೀಡಿದೆ.
ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ಗ್ರಾಪಂ ಸದಸ್ಯರ ಗೌರವಧನ 250 ರೂ. ನಿಂದ 1000 ರೂ. ಮಾಡಿದ್ದು ಯಡಿಯೂರಪ್ಪನರು. ಕಾಂಗ್ರೆಸ್‌ ಅ ಧಿಕಾರದಲ್ಲಿ ಗ್ರಾಪಂಗೆ 5 ಲಕ್ಷ ರೂ. ಬರುತ್ತಿರಲಿಲ್ಲ. ಆದರೆ ಇಂದು 50 ಲಕ್ಷ ರೂ.ನಿಂದ 1 ಕೋಟಿ ರೂ. ಅನುದಾನ ಬರುತ್ತಿದೆ. ಹಿಂದೆ ರಸ್ತೆ ಎನ್ನುವುದು ಕನಸಾಗಿತ್ತು, ಇಂದು ಕಾಂಕ್ರೀಟ್‌ ರಸ್ತೆಗಳು ಬಂದಿವೆ. ತಂತ್ರಜ್ಞಾನ ಹಳ್ಳಿಗಳಿಗೆ ತಲುಪಿದೆ. ಸರಕಾರದ ಸೌಲಭ್ಯಗಳ ದೊಡ್ಡ ಪಟ್ಟಿಯಿದೆ. ಎಲ್ಲಾ ಸಮಸ್ಯೆಗೂ ಬಿಜೆಪಿ ಪರಿಹಾರ.
ಎನ್‌.ರವಿಕುಮಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next