ಮೈಸೂರು: ಬಿಜೆಪಿ ಪ್ರಾಯೋಜಿತ ಸಮೀಕ್ಷಾ ವರದಿಗಳನ್ನು ನಂಬದೆ, ಬಿಎಸ್‌ಪಿ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿ. ಈ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಬಿಎಸ್‌ಪಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಜೊತೆ ಮಾಡಿಕೊಂಡಿರುವ ಮೈತ್ರಿಯಿಂದಾಗಿ ಅಲ್ಲಿನ ಬಹುತೇಕ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ.
ಅದೇ ರೀತಿಯಲ್ಲಿ ಬೇರೆ ರಾಜ್ಯಗಳಲ್ಲೂ ಹೆಚ್ಚು ಸ್ಥಾನಗಳನ್ನುಗೆದ್ದರೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ ಎಂದರು. ಸ್ವಾತಂತ್ಯಾನಂತರ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ಪಕ್ಷಗಳು ದೇಶವನ್ನು ಆಳಿವೆ. ಕಾಂಗ್ರೆಸ್ ಸುದೀರ್ಘ ಕಾಲ ದೇಶವನ್ನು ಆಳಿದರೂ ಶಾಶ್ವತವಾದ ಯೋಜನೆಗಳನ್ನು ರೂಪಿಸಲಿಲ್ಲ.
ಈಗ ಅಧಿಕಾರದಲ್ಲಿರುವ ಆರ್‌ಎಸ್‌ಎಸ್ ವಾದಿ, ಜಾತಿವಾದಿ, ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯಬೇಕಿದೆ. ಕಾಂಗ್ರೆಸ್ ಬೋಫೋರ್ಸ್ ಹಗರಣ ಮಾಡಿದರೆ, ಬಿಜೆಪಿ ರಫೇಲ್ ಹಗರಣ ಮಾಡಿದೆ. ಚೌಕೀದಾರ್ ಎಂದು ಕರೆದುಕೊಳ್ಳುತ್ತಿರುವ ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಗಡಿ ಸುರಕ್ಷಿತವಾಗಿಲ್ಲ ಎಂದು ಟೀಕಿಸಿದರು
ಮಾಯಾವತಿ ಪ್ರಚಾರ ಪರಿಣಾಮ ಬೀರಲಿದೆ – ಕೃಷ್ಣ: ಈ ಮಧ್ಯೆ, ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಪ್ರಭಾವಿ ರಾಜಕಾರಣಿಯಾಗಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ, ಮೈಸೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿರುವುದರಿಂದ ಈ ಭಾಗದಲ್ಲಿ ಪರಿಣಾಮ ಬೀರಬಹುದು. ಮಾಯಾವತಿ ಅವರು ಈಗಾಗಲೇ ಕಾಂಗ್ರೆಸ್ ಜತೆಗೆ ಹೋಗಲ್ಲ ಎಂದು ಹೇಳಿದ್ದಾರೆ ಎಂದರು.