Advertisement

Congress ಸರ್ಕಾರ ಬೀಳಿಸುವ ಯತ್ನ ಬಿಜೆಪಿ ಮಾಡಿಲ್ಲ: ವಿಪಕ್ಷ ನಾಯಕ ಆರ್‌.ಅಶೋಕ್‌

03:16 AM Aug 25, 2024 | Team Udayavani |

ಬೆಂಗಳೂರು: ಬಿಜೆಪಿ ಎಂದಿಗೂ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿಲ್ಲ. ಅಂತಹ ಆವಶ್ಯಕತೆ ನಮಗಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂದು ಮ್ಯೂಸಿಕಲ್‌ ಚೇರ್‌ನಂತೆ ಸ್ಪರ್ಧೆ ನಡೆಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಹೀಗೆ ಎಲ್ಲರೂ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್‌ ಶಾಸಕರಲ್ಲೇ  ಈ ವಿಷಯ ಬಹಳ ಚರ್ಚೆಯಾಗುತ್ತಿದೆ ಎಂದರು. ರಾಜ್ಯದಲ್ಲಿ ಮೊದಲಿನಿಂದಲೂ ಹಿಂದೂಗಳಿಗೆ ರಕ್ಷಣೆ ಇಲ್ಲ. ಬಾಂಗ್ಲಾದಂತೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತೇವೆ ಎಂದು ಕಾಂಗ್ರೆಸ್‌ ಶಾಸಕ ಐವನ್‌ ಡಿಸೋಜ ಹೇಳಿದ್ದಾರೆ. ಅದಕ್ಕೆ ಹಿರಿಯ ನಾಯಕರು ಏನೂ ಸ್ಪಷ್ಟನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸಂಬಂಧಿಸಿದ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ರೂಪಿಸಿದೆ. ಇಂತಹ ವಿಧೇಯಕಗಳ ಸಾಧಕ-ಬಾಧಕಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ್‌ ಹತ್ತಾರು ವಿಧೇಯಕಗಳನ್ನು ವಾಪಸ್‌ ಕಳುಹಿಸಿದ್ದರು. ರಾಜಭವನ ಎಂದರೆ ಬಿಜೆಪಿ ಕಚೇರಿ ಎನ್ನುವುದು ಹಳಸಿದ ಮಾತು. ವಿಧೇಯಕವನ್ನು ಮರಳಿ ಕಳುಹಿಸಿದರೆ ಅದಕ್ಕೆ ಸರ್ಕಾರ ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಬೇಕು.

ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಈ ಕರ್ತವ್ಯ ಮಾಡದೇ ಇದ್ದಲ್ಲಿ ಅದು ಸರ್ಕಾರದ ನಿರ್ಲಕ್ಷ್ಯವೇ ಹೊರತು ರಾಜ್ಯಪಾಲರ ತಪ್ಪಲ್ಲ. ಸರ್ಕಾರ ತಪ್ಪು ಮಾಡಿ ಅದನ್ನು ರಾಜ್ಯಪಾಲರ ಮೇಲೆ ಹೇರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next