ಹೋಶಿಯಾರ್‌ಪುರ್ : ಕೇಂದ್ರ ಸಚಿವ ವಿಜಯ್ ಸಾಂಪ್ಲಾ ಅವರಿಗೆ ಬಿಜೆಪಿ ಹೋಶಿಯಾರ್ ಪುರ್ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟನ್ನು ನೀಡದೆ ಬೇರೆ ಅಭ್ಯರ್ಥಿಗೆ ನೀಡಿದೆ. ಈ ಕ್ರಮದ ಕುರಿತು ತೀವ್ರ ಅಸಮಾಧಾನ ಹೊರ ಹಾಕಿರುವ ವಿಜಯ್ ಸಾಂಪ್ಲಾ ಪಕ್ಷ ಗೋಹತ್ಯೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಹೋಶಿಯಾರ್ ಪುರ್‌ಗೆ ಹಾಲಿ ಶಾಸಕ, ಮಾಜಿ ನಾಗರಿಕ ಸೇವೆ ಅಧಿಕಾರಿ ಸೋಮ್ ಪ್ರಕಾಶ್ ಅವರಿಗೆ ಟಿಕೆಟ್ ನೀಡಿದೆ.
2014 ರ ಚುನಾವಣೆಯಲ್ಲಿ ಸಾಂಪ್ಲಾ ಅವರು ಹೋಶಿಯಾರ್‌ಪುರದಿಂದ 13,500 ಮತಗಳ ಅಂತರದಿಂದ ಜಯಗಳಿಸಿದ್ದರು.
ನಾನೇನು ತಪ್ಪು ಮಾಡಿದ್ದೇನೆ? ನನ್ನ ತಪ್ಪು ಏನೆಂದು ಯಾರಾದರು ಹೇಳಲಿ , ನನ್ನ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ. ಯಾರೂ ನನ್ನ ಮೇಲೆ ಬೆರಳು ತೋರಿಸಿಲ್ಲ. ನಾನು ನನ್ನ ಕ್ಷೇತ್ರಕ್ಕೆ ವಿಮಾನ ನಿಲ್ದಾಣ, ರೈಲು ನಿಲ್ದಾಣ , ರಸ್ತೆಗಳನ್ನು ಮಾಡಿಸಿದ್ದೇ ತಪ್ಪೇ? , ನನ್ನ ಮುಂದಿನ ಪೀಳಿಗೆಗೆ ಹೀಗಾಗಬಾರದು ಎಂದು ಸಾಂಪ್ಲಾ ಟ್ವೀಟ್ ಮಾಡಿದ್ದಾರೆ.
ಸಾಂಪ್ಲಾ ಅವರು 2016 ರಿಂದ 18 ರ ವರೆಗೆ ಪಂಜಾಬ್ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಶಿರೋಮಣಿ ಆಕಾಲಿದಳದೊಂದಿಗಿನ ಬಿಜೆಪಿ ಮೈತ್ರಿಕೂಟ 2017 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಸಾಂಪ್ಲಾ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲಾಗಿತ್ತು.