Advertisement

ಸಚಿವೆ ಜಯಮಾಲಾ ರಾಜೀನಾಮೆಗೆ ಬಿಜೆಪಿ ಆಗ್ರಹ

01:58 AM Apr 02, 2019 | Sriram |

ಬೆಂಗಳೂರು : ಮಕ್ಕಳ ಆಶ್ರಯ ಕೇಂದ್ರದ ಸಿಬ್ಬಂದಿಯೇ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಿರುವ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಡಾ.ಜಯಮಾಲಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Advertisement

ಚಿಕ್ಕಬಳ್ಳಾಪುರದ ಮಕ್ಕಳ ಆಶ್ರಯ ಕೇಂದ್ರದ ನಾಲ್ವರು ಹೆಣ್ಣು ಮಕ್ಕಳನ್ನು ಅಲ್ಲಿನ ಭದ್ರತಾ ಸಿಬ್ಬಂದಿಯೇ ವೇಶ್ಯಾವಾಟಿಕೆಗೆ ದೂಡಿರುವ ಅಮಾನವೀಯ ಘಟನೆಗೆ ನೇರ ಹೊಣೆ ಹೊತ್ತು ಸಚಿವೆ ಜಯಮಾಲ ರಾಜೀನಾಮೆ ನೀಡಬೇಕು. ಈ ಘಟನೆ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ ಎಂದು ವಿಧಾನ ಪರಿಷತ್‌ ಸದಸ್ಯೆ ಡಾ.ತೇಜಸ್ವಿನಿ ಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೈಂಗಿಕ ಕಿರುಕುಳ, ಶೋಷಣೆಗಳಿಂದ ನೊಂದಿರುವ ಹೆಣ್ಣು ಮಕ್ಕಳಿಗೆ ಹೊಸ ಬದುಕು ಕಲ್ಪಿಸಲು ಈ ಕೇಂದ್ರ ತೆರೆಯಲಾಗಿದೆ. ನೊಂದ ಮನಸ್ಸುಗಳ ಮೇಲೆ ಈ ರೀತಿಯ ಶೋಷಣೆ ನಿಜಕ್ಕೂ ಅಕ್ಷಮ್ಯ ಅಪರಾಧ. ಭದ್ರತಾ ಸಿಬ್ಬಂದಿಯೇ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ದೂಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ದೇಶದಲ್ಲಿನ ಎಲ್ಲ ಮಕ್ಕಳ ಆಶ್ರಯ ಕೇಂದ್ರಗಳ ಬಗ್ಗೆ ಪರಿಶೋಧನೆ ಮಾಡಿ, ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಈ ಹಿಂದೆ ರಾಜ್ಯಗಳಿಗೆ ಸೂಚಿಸಿದ್ದರು. ಆದರೆ, ಕರ್ನಾಟಕ ಸರ್ಕಾರ ಈ ಸೂಚನೆಯನ್ನು ಪಾಲಿಸದೇ ಇರುವುದರಿಂದ ಇಂತಹ ಘಟನೆ ನಡೆದಿದೆ. ರಾಜ್ಯ ಸರ್ಕಾರ ಈಗಿನಿಂದಲೇ ಮಕ್ಕಳ ಆಶ್ರಯ ಕೇಂದ್ರಗಳ ಸುರಕ್ಷತೆಗೆ ವಿಶೇಷ ಒತ್ತು ನೀಡಬೇಕು ಆಗ್ರಹಿಸಿದರು.

ಹೋರಾಟದ ಎಚ್ಚರಿಕೆ
ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದರೆ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ. ಮಂಡ್ಯದ ಸಂಸದ ಎಲ್‌.ಆರ್‌.ಶಿವರಾಮೆಗೌಡ ಅವರು, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜಾತಿಯ ಬಗ್ಗೆ ಮಾತನಾಡಿದ್ದಾರೆ. ಮೈತ್ರಿ ಪಕ್ಷವಾದ ಕಾಂಗ್ರೆಸ್‌ ನಾಯಕಿಯರ ಬಗ್ಗೆಯೂ ಶಿವರಾಮೆಗೌಡ ಅವರು ಇದೇ ರೀತಿ ಮಾತನಾಡುವರೇ? ಚುನಾವಣೆ ಗೆಲ್ಲಲು ಕೀಳುಮಟ್ಟದ ರಾಜಕೀಯದಲ್ಲಿ ಜೆಡಿಎಸ್‌ ನಾಯಕರು ತೊಡಗಿದ್ದಾರೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಪ್ರತಿಪಕ್ಷಗಳು ಹೇಳಿಕೆಗಳನ್ನು ನೀಡುತ್ತಿವೆ. ಮಹಿಳೆಯರ ಬಗ್ಗೆ ಇದೇ ರೀತಿ ಮಾತನಾಡುವುದನ್ನು ಮುಂದುವರಿಸಿದರೆ ರಾಜ್ಯ ಮಹಿಳಾ ಮೋರ್ಚಾ ಬೀದಿಗಿಳಿದು ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next