Advertisement

ಡಿಕೆಶಿ ವಜಾ, ಲೋಕಾಯುಕ್ತ ತನಿಖೆಗೆ BJP ಆಗ್ರಹ

10:42 PM Aug 11, 2023 | Team Udayavani |

ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪದಲ್ಲಿ ಸಿಲುಕಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸಂಪುಟದಿಂದ ವಜಾಗೊಳಿಸುವ ಜತೆಗೆ ಈ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Advertisement

ಪಕ್ಷದ ಕಚೇರಿಯಲ್ಲಿ ಶುಕ್ರ ವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, “ಡಿ.ಕೆ.ಶಿವಕುಮಾರ್‌ 6,000 ಕೋಟಿ ರೂ.ಗೆ ಒಟ್ಟಿಗೆ ಕಮಿಷನ್‌ ಕೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಶೇ.1ರಷ್ಟಾದರೂ ಪ್ರಾಮಾಣಿಕತೆ ಇದ್ದರೆ ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ನೀಡಲಿ. ಇಷ್ಟೊಂದು ಆರೋಪ ಎದುರಿಸುತ್ತಿರುವ ಶಿವಕುಮಾರ್‌ರನ್ನು ಇನ್ನೂ ಏಕೆ ಸಂಪುಟದಲ್ಲಿ ಉಳಿಸಿಕೊಂಡಿದ್ದೀರಿ’ ಎಂದು ಪ್ರಶ್ನಿಸಿದರು.

ಪ್ರಮಾಣ ಮಾಡಲಿ:
ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಮಾತನಾಡಿ, “ಡಿ.ಕೆ.ಶಿವಕುಮಾರ್‌ ಅವರಿಗೆ ದಮ್ಮು , ತಾಕತ್ತು ಇದ್ದರೆ ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ. ಗುತ್ತಿಗೆದಾರನೇ ನಿಮ್ಮ ಮೇಲೆ ಕಮಿಷನ್‌ ಆರೋಪ ಮಾಡಿದ್ದಾರೆ. ಹೋಗಪ್ಪ ಅಜ್ಜಯ್ಯನ ಬಳಿ ಆಣೆ ಮಾಡು, ಯಾಕಪ್ಪ ಇಷ್ಟು ಬೆದರುತ್ತಿದ್ದೀಯಾ, ಸತ್ಯ ಆಚೆ ಬರುತ್ತದೆ ಎಂಬ ಆತಂಕ ಕಾಡುತ್ತಿದೆಯೇ’ ಎಂದು ಕಿಡಿಕಾರಿದರು.

ಶಿವಕುಮಾರ್‌ ಬೆಂಗಳೂರು ಅಭಿವೃದ್ಧಿ ಸಚಿವರಲ್ಲ. ಬೆಂಗಳೂರು ನಿರ್ನಾಮ ಸಚಿವ. ನಿಮ್ಮ ರಾಜಕೀಯ ಉಳಿವಿಗಾಗಿ ಕೆಂಪೇಗೌಡರ ಹೆಸರನ್ನು ದುರ್ಬಳಕೆ ಮಾಡುವುದನ್ನು ಇನ್ನಾದರೂ ನಿಲ್ಲಿಸಿ. ನಿಮ್ಮ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ 1 ರೂ.ನ್ನೂ ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ. ಯೋಜನೆಗೆ ಒಂದು ರೇಟು, ಎಲ್‌ಓಸಿಗೆ ಒಂದು ರೇಟು. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳ ನಂತರ ತನಿಖೆಗೆ ಆದೇಶ ನೀಡಿದ್ದೀರಿ. ಅಲ್ಲಿಯವರೆಗೆ ನೀವೇನು ವ್ಯವಹಾರ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್‌ ಮತ್ತು ಚಲುವರಾಯ ಸ್ವಾಮಿ ವಿರುದ್ಧ ಲೋಕಾಯುಕ್ತ ತನಿಖೆಯಾಗಬೇಕು. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳುವ ಸಿದ್ದರಾಮಯ್ಯನವರು ಈ ಆರೋಪ ಕುರಿತು ಏಕೆ ತುಟಿ ಬಿಚ್ಚುತ್ತಿಲ್ಲ? ಗುತ್ತಿಗೆದಾರರೇ ರಾಜ್ಯಪಾಲರನ್ನು ಭೇಟಿಯಾಗಿ ದೂರು ಕೊಟ್ಟಿದ್ದಾರೆ. ಈಗ ಇದು ಬಿಜೆಪಿ ಪ್ರೇರಿತ, ನಕಲಿ ಪತ್ರ ಎಂದು ಕಾಗಕ್ಕ ಗೂಬಕ್ಕನ ಕಥೆ ಕಟುತ್ತಿದ್ದಾರೆ. ಡಿಕೆಶಿ ರಾಜಕೀಯ ಹಿನ್ನಲೆ ಎಲ್ಲರಿಗೂ ಗೊತ್ತಿದೆ. ಆರು ಸಾವಿರ ಕೋಟಿ ರೂ. ಯೋಜನೆಯಲ್ಲಿ 10 ರಿಂದ 15 ಪರ್ಸೆಂಟ್‌ ಕಮಿಷನ್‌ ಕೇಳಿರುವುದು ಸತ್ಯ. ಮುಂಬರುವ ಯೋಜನೆಗೂ 15 ಪರ್ಸೆಂಟ್‌ ಕಮಿಷನ್‌ ಕೇಳಿ¨ªಾರೆ ಎಂದು ಆರೋಪಿಸಿದರು. ಜತೆಗೆ, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿಯೂ ತಿಳಿಸಿದರು.

Advertisement

ಎಟಿಎಂ ಸರ್ಕಾರ ಅಭಿಯಾನ
ಬಿಜೆಪಿ ಸರ್ಕಾರದ ವಿರುದ್ಧ ಈ ಹಿಂದೆ ಪೇ ಸಿಎಂ ಅಭಿಯಾನ ನಡೆಸಿದ್ದ ಕಾಂಗ್ರೆಸ್‌ಗೆ “ಎಟಿಎಂ ಸರ್ಕಾರ್‌- ಕರ್ನಾಟಕದಿಂದ ಗಾಂಧಿ ಕುಟುಂಬಕ್ಕೆ’ ಎಂಬ ಅಭಿಯಾನವನ್ನು ಆರಂಭಿಸುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಅಲ್ಲದೇ, ಬಿಜೆಪಿಯ ಘಟಾನುಘಟಿ ನಾಯಕರು ಟ್ವೀಟ್‌ ಮಾಡಿ, ಸರ್ಕಾರ ಹಾಗೂ ಗಾಂಧಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next