Advertisement

ಅಕ್ರಮ ತಡೆಗೆ ಬಿಜೆಪಿ ಆಗ್ರಹ

11:53 AM May 25, 2018 | |

ಬೆಂಗಳೂರು: ಮೇ 28ರಂದು ನಡೆಯಲಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಎಲ್ಲ ಬೂತ್‌ಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಆಗ್ರಹಿಸಿದೆ.

Advertisement

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಅವರನ್ನು ಗುರುವಾರ ಭೇಟಿ ಮಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟ.ರವಿ ನೇತೃತ್ವದ ನಿಯೊಗ, ಆರ್‌.ಆರ್‌.ನಗರದಲ್ಲಿ ಮತದಾನದ ವೇಳೆ ವ್ಯಾಪಕ ಚುನಾವಣಾ ಅಕ್ರಮಗಳು ನಡೆಯುವ ಸಾಧ್ಯತೆಗಳಿದ್ದು, ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿತು.

ಚುನಾವಣೆ ವೇಳೆ ಮತದಾನ ಮಾಡಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಹೊರಗಡೆಯಿಂದ ಜನರನ್ನು ಕರೆತರುವ ಹುನ್ನಾರ ನಡೆಸಲಿದ್ದಾರೆ. ಹೀಗಾಗಿ ಮತದಾನದ ದಿನದಂದು ವಾಹನಗಳಲ್ಲಿ ಜನರನ್ನು ಕರೆ ತರುವ ಪ್ರಯತ್ನವನ್ನು ನಿರ್ಬಂಧಿಸಬೇಕು. ಇದಕ್ಕಾಗಿ ವಿಶೇಷ ಸಂಚಾರಿ ಪಡೆಯನ್ನು ರಚಿಸಿ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಚುನಾವಣಾ ಕಾರ್ಯಕ್ಕೆ ಸ್ಥಳೀಯ ಅಧಿಕಾರಿಗಳ ಬದಲು ಹೊರಗಿನ ಅಧಿಕಾರಿಗಳನ್ನು  ನಿಯೋಜಿಸಬೇಕು ಎಂದು ಬಿಜೆಪಿ ನಿಯೋಗ ಮನವಿ ಮಾಡಿತು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಆರ್‌.ಆರ್‌.ನಗರ ಕ್ಷೇತ್ರದಲ್ಲಿ 48 ಸಾವಿರ ಹೊಸ ಮತದಾರರ ಹೆಸರು ಸೇರಿಸಲಾಗಿದ್ದು, ಮನೆ ಇಲ್ಲದ ಜಾಗದ ಹೆಸರಲ್ಲಿ ಮತದಾರರ ಹೆಸರಿದೆ. ಸ್ಥಳೀಯ ಅಧಿಕಾರಿಯನ್ನು ದುರ್ಬಳಕೆ ಮಾಡಿಕೊಂಡು ಈ ಕೆಲಸ ಮಾಡಲಾಗಿದೆ. ನಕಲಿ ಮತದಾರರಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು. ಕೇಂದ್ರದ ಪಡೆಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next