Advertisement

ಕಳಂಕಿತ ಸಚಿವರ ವಜಾಕ್ಕೆ ಆಗ್ರಹ: ಬಿಜೆಪಿ ಆಕ್ರೋಶ

03:13 PM Aug 19, 2017 | |

ಶಿವಮೊಗ್ಗ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರಾದ ಡಿ.ಕೆ. ಶಿವಕುಮಾರ್‌, ರಮೇಶ್‌ ಜಾರಕಿಹೊಳಿ ಹಾಗೂ ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ
ನಡೆಸಲಾಯಿತು.

Advertisement

ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ಮೆರವಣಿಗೆ ನಡೆಸಿ ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ವೈ. ರಾಘವೇಂದ್ರ, ದೇಶದ 18 ರಾಜ್ಯಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಬಿಜೆಪಿ, ರಾಜ್ಯಸರ್ಕಾರದ ಭ್ರಷ್ಟಾಚಾರದಿಂದಾಗಿ ಜನ ರಾಜ್ಯ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದು, ಇದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಅಧಿಕ್ಕಾರಕ್ಕೇಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದಲ್ಲಿ ಭ್ರಷ್ಟರಿಗೆ ಸ್ಥಾನ ನೀಡಿದ್ದು, ಹಲವು ಸಚಿವರು ಹಗರಣದಲ್ಲಿ ಸಿಲುಕಿದರೂ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಪೊಲೀಸ್‌ ಅಧಿಕಾರಿಯೋರ್ವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಂಪುಟದಿಂದ ವಜಾಗೊಂಡಿದ್ದ ಕೆ.ಜೆ.
ಜಾರ್ಜ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿ ಮತ್ತೂಮ್ಮೆ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿಗೆ ಒಳಗಾಗಿದ್ದ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಸಹಾ ರಕ್ಷಣೆ ಮಾಡುತ್ತಿದ್ದು, ಸರ್ಕಾರ ಭ್ರಷ್ಟರ ಕೂಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಈ ಎಲ್ಲ ಭ್ರಷ್ಟಾಚಾರ ಮತ್ತು ಹಗರಣಗಳನ್ನು ರಾಜ್ಯದ ಜನತೆ ವೀಕ್ಷಿಸುತ್ತಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ಆರ್‌.ಕೆ. ಸಿದ್ದರಾಮಣ್ಣ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ನಾಲ್ಕೂವರೆ ವರ್ಷ ಪೂರ್ಣಗೊಂಡಿದೆ. ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಭ್ರಷ್ಟಾಚಾರದ ವಿರುದ್ದ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದರು. ಈಗ ಅದನ್ನೆಲ್ಲಾ ಮರೆತು ತಮ್ಮ ಸಂಪುಟದ ಭ್ರಷ್ಟ ಸಚಿವರನ್ನು ಬೆಂಬಲಿಸುವುದರಲ್ಲಿ ನಿರತರಾಗಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟ ಸಚಿವರ ರಕ್ಷಣೆ ಮಾಡುತ್ತಿದ್ದಾರೆ. ಅದಕ್ಕೆ ಎಸಿಬಿ ಅನ್ನು ಬಳಿಸಿಕೊಳ್ಳುತ್ತಿದ್ದಾರೆ. ಇದು ನಾಚಿಕೆ ಗೇಡಿನ ಸಂಗತಿ. ಸಚಿವ ಕೆ.ಜೆ. ಜಾರ್ಜ್‌ ಹಾಗೂ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು.  ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್‌, ಜಿಪಂ ಸದಸ್ಯ ಕೆ.ಇ. ಕಾಂತೇಶ್‌, ಮುಖಂಡರಾದ ಎಸ್‌. ದತ್ತಾತ್ರಿ, ಡಿ.ಎಸ್‌. ಅರುಣ್‌, ಟಿ.ಡಿ. ಮೇಘರಾಜ್‌, ಗುರುಮೂರ್ತಿ, ಎಸ್‌.ಎಸ್‌. ಜ್ಯೋತಿ ಪ್ರಕಾಶ್‌, ಎಸ್‌. ಜ್ಞಾನೇಶ್ವರ್‌, ರೂಪಾ ಲಕ್ಷ್ಮಣ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next