Advertisement

BJP; ದಿಲ್ಲಿ ಚಲೋಗೆ ಪಕ್ಷದ ವರಿಷ್ಠರ ಅನುಮತಿ: ರಾಷ್ಟ್ರಮಟ್ಟದ ಅಸ್ತ್ರ

11:52 PM Aug 26, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಭ್ರಷ್ಟಾಚಾರ ಹಾಗೂ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿಭಟನೆಯ ಕಹಳೆ ಮೊಳಗಿಸಲು ರಾಜ್ಯ ಘಟಕ ಸಲ್ಲಿಸಿದ್ದ ಪ್ರಸ್ತಾವಕ್ಕೆ ಬಿಜೆಪಿ ವರಿಷ್ಠರು ಒಪ್ಪಿಗೆ ಸೂಚಿಸಿದ್ದು, ಸೆಪ್ಟಂಬರ್‌ ಮೊದಲ ವಾರದಲ್ಲಿ ರಾಜ್ಯ ಕೇಸರಿ ಪಡೆ ದಿಲ್ಲಿಗೆ ದೌಡಾಯಿಸಲಿದೆ.

Advertisement

ಬಿಜೆಪಿಯ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ದಿಲ್ಲಿಗೆ ತೆರಳಿ, ರಾಹುಲ್‌ ಗಾಂಧಿ ನಿವಾಸ ಹಾಗೂ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಆ. 29ರಂದು ಸಿದ್ದರಾಮಯ್ಯ ವರ್ಸಸ್‌ ರಾಜ್ಯ ಪಾಲರ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್‌ ನೀಡುವ ತೀರ್ಪು ಅಥವಾ ನಿರ್ದೇಶನವನ್ನು ಆಧರಿಸಿ ಅಂತಿಮ ದಿನಾಂಕ ನಿರ್ಧರಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಷ್ಟ್ರಮಟ್ಟದ ಅಸ್ತ್ರ
ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣವನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ನಾಯಕತ್ವ ನಿರ್ಧರಿಸಿದೆ. ಜತೆಗೆ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿಕೊಂಡಿರುವುದು ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಗೆ ನಿದರ್ಶನ ಎಂಬುದನ್ನು ಪ್ರತಿಪಾದಿಸಲು ಬಿಜೆಪಿ ಮುಂದಾಗಿದೆ. ನಾಲ್ಕು ರಾಜ್ಯಗಳ ಚುನಾವಣೆ ಹೊಸ್ತಿಲಲ್ಲಿ ಈ ವಿಷಯವಾಗಿ ಅಭಿಯಾನ ರೂಪದ ಹೋರಾಟ ನಡೆಸಿ ಕಾಂಗ್ರೆಸ್‌ನ್ನು ಮುಜುಗರಕ್ಕೆ ಸಿಲುಕಿಸುವುದು ಬಿಜೆಪಿಯ ತಂತ್ರವಾಗಿದೆ.

ಕಾಂಗ್ರೆಸ್‌ ಎಸ್‌ಸಿ-ಎಸ್‌ಟಿ ಹಣವನ್ನು ದುರ್ಬಳಕೆ ಮಾಡಿ ಆ ವರ್ಗಕ್ಕೆ ಅನ್ಯಾಯ ಮಾಡಿದೆ. ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಅನಾವರಣ ಗೊಳಿಸುವ ಉದ್ದೇಶದಿಂದ ದೇಶದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಕಾಂಗ್ರೆಸ್‌ ಮುಖವಾಡ ಬಯಲು ಮಾಡುತ್ತೇವೆ. -ಸುನಿಲ್‌ ಕುಮಾರ್‌,ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next