ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಿರುವ ವಿಚಾರದಲ್ಲಿ ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ. ಆದರೆ; ಮುಖ್ಯಮಂತ್ರಿಗಳೇ ಪತ್ರ ಬರೆದು ದೇವೇಗೌಡರನ್ನು ಆಹ್ವಾನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ ಎಂದು ದೂರಿದೆ.
ಮುಖ್ಯಮಂತ್ರಿಗಳೇ ಪತ್ರ ಬರೆದಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಲಾಗಿದೆ. ಆದರೆ, ನ.11ರ ಕಾರ್ಯಕ್ರಮಕ್ಕೆ ಪತ್ರ ಬರೆದಿದ್ದು ಯಾವಾಗ, ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ ಎಂದು ಪ್ರಶ್ನಿಸಿದೆ.
ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ, ಮುಖ್ಯಮಂತ್ರಿಗಳು ಬರೆದ “ಘನವೆತ್ತ’ ಪತ್ರವನ್ನೊಮ್ಮೆ “ಸಂಘಸಂಸ್ಕಾರ’ದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ. ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Related Articles
ಮರುದಿನ 12.50ರ ಸಮಾರಂಭಕ್ಕೆ ರಾತ್ರಿ 9 ಗಂಟೆಗೆ ಮಾಜಿ ಪ್ರಧಾನಿಗಳಿಗೆ ಕಾಟಾಚಾರದ ಕರೆ ಮಾಡಿದ ಮುಖ್ಯಮಂತ್ರಿಗಳು, ತಾವು ಬರೆದ ಪತ್ರವನ್ನು ತಲುಪಿಸಿದ್ದು ಮಧ್ಯರಾತ್ರಿ 12.30 ಗಂಟೆಗೆ. ಹಾಗಾದರೆ, ಅವರ ಮೊದಲ ಪತ್ರ ಹೋಗಿದ್ದು ಯಾರಿಗೆ. ಇಂಥ ಹಿರಿಯರ ವಿಷಯದಲ್ಲಿ ಜಬಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ವರ್ತಿಸುವ ರೀತಿ ಹೀಗೇನಾ ಎಂದಿದೆ.