ಮಾಲೂರು: ನಗರ ಬಿಜೆಪಿ ವತಿಯಿಂದ ಪುರಸಭಾ ಚುನಾವಣೆಗಳ ಪೂರ್ವ ಸಿದ್ಧತೆಗಳ ಚಿಂತನೆಗಳ ಸಮಾಲೋಚನೆ ಸಭೆ ಶಾಂತಿಯುತವಾಗಿ ನಡೆಯಿತು. ನಗರ ಘಟಕದ ಬಿಜೆಪಿ ಅಧ್ಯಕ್ಷ ಎಂ.ಸಿ.ರವಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಕುಂಭೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬೆಂಬಲಿಸಲು ಮುಖಂಡರು ಮನವಿ ಮಾಡಿದರು.
ಆಕ್ರೋಶ ವ್ಯಕ್ತಪಡಿಸಿದರು: ಪಟ್ಟಣದ ಎಲ್ಲಾ 27 ವಾರ್ಡ್‌ಗಳಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಪುರಸಭೆ ಸಾರ್ವತ್ರಿಕ ಚುನಾವಣೆ ರೂಪುರೇಷಗಳನ್ನು ಸಿದ್ಧಪಡಿಸುವ ವಿಚಾರವಾಗಿ ಸಭೆ ಕರೆಯಲಾಗಿತ್ತು. ಇಂದಿನ ಸಭೆಗೆ ಕಳೆದ ವಿಧಾನ
ಸಭೆಯ ಚುನಾವಣೆ ವೇಳೆಯಲ್ಲಿ ಜೆಡಿಎಸ್ ಪರವಾಗಿ ನೇರವಾಗಿ ಪ್ರಚಾರಕ್ಕೆ ಇಳಿದ ಸದಸ್ಯರು ಹಾಜರಾಗಿದ್ದ ಕಾರಣ ಸಭೆಯಲ್ಲಿದ್ದ ಕೆಲವು ಯುವ ಕಾರ್ಯಕರ್ತರನ್ನು ಸಹಜವಾಗಿಯೇ ಕೆರಳಿಸಿ ತ್ತು. ಕಳೆದ ಪುರಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಸಾಧಿಸಿದ ಕೆಲವು ಸದಸ್ಯರು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬಿಟ್ಟು ಜೆಡಿಎಸ್ ಪಾಳೇಯದಲ್ಲಿ ಗುರುತಿಸಿಕೊಂಡಿದ್ದು ಕೆಲ ಯುವ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಂಘಟಿತರಾಗಲು ಸಲಹೆ: ಸಭೆ ಆರಂಭದಿಂದಲೂ ಬಿಗುವಿನ ವಾತಾವರಣ ದಲ್ಲಿಯೇ ನಡೆದ ಸಭೆಯಲ್ಲಿ ಕೆಲವೇ ಕಾರ್ಯಕರ್ತರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಮಾತ್ರ ಮನ್ನಣೆ ನೀಡುವಂತೆ ಒತ್ತಿ ಹೇಳುವ ಪ್ರಯತ್ನ ನಡೆಸಿದರು. ಅಲ್ಲದೇ, ಮಧ್ಯ ಪ್ರವೇಶ ಮಾಡಿದ ಬಿಜೆಪಿ ಜಿಲ್ಲಾ ಉಸ್ತುವಾರಿ ವಹಿಸಿದ್ದ ಸಚ್ಚಿದಾನಂದ ಮೂರ್ತಿ, ಪುರಸಭಾ ಚುನಾವಣೆ ಪೂರ್ವ ಸಿದ್ಧತಾ ಸಭೆಯಾಗಿ ದ್ದು ಇಲ್ಲಿ ಆಕ್ರೋಶವಾಗಿ ಮಾತನಾಡುವುದು ಬೇಡ. ಮುಂದಿನ ದಿನಗಳಲ್ಲಿಯೇ ಪಟ್ಟಣದ ಕಾರ್ಯಕರ್ತರ ಸಭೆ ನಡೆಸಿಪ್ರತಿಯೊಬ್ಬರೂ ಮುಕ್ತವಾಗಿ ಮಾತನಾಡಿ ಸೂಕ್ತ ವ್ಯಕ್ತಿಯನ್ನು ಚುನಾವಣೆಗೆ ಇಳಿಸುವ ಕಾರ್ಯವಾಗಬೇ ಕಾಗಿದೆ. ಪಕ್ಷ ಸಂಘಟನೆ ಹಿತ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಎ.ನಾಗರಾಜು ಮಾತನಾಡಿ, ಪ್ರಸ್ತುತ ಚುನಾವಣೆಗಳ ಖರ್ಚು ವೆಚ್ಚ ಅಧಿಕವಾಗುತ್ತಿದ್ದು ಮುಖಂಡರು ಮತ್ತು ಪಕ್ಷವನ್ನು ಮಾತ್ರ ನಂಬಿ ಟಿಕೆಟ್ ಕೇಳುವ ಆಕಾಂಕ್ಷಿಗಳ ಬದಲಿಗೆ ಸ್ವಂತ ಶಕ್ತಿಯಿಂದ ಚುನಾವಣೆ ನಡೆಸುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕಾರ್ಯವಾಗಬೇಕಾಗಿದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಸಿ.ರವಿ ಮಾತನಾಡಿ, ಎಲ್ಲಾ ವಾರ್ಡ್‌ಗಳ ಸರ್ವೆ ನಡೆಸಿ ಸೂಕ್ತ ಅಭ್ಯರ್ಥಿಯನ್ನು ಜನಾಭಿಪ್ರಾಯದೊಂದಿಗೆ ಆಯ್ಕೆ ಮಾಡಲಾಗುವುದು ಎಂದರು. ಸಭೆಯಲ್ಲಿ ಮಾಜಿ ಶಾಸಕ ಎ.ನಾಗರಾಜು, ತಬಲ ಎ.ನಾರಾಯಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚ್ಚಿದಾನಂದ ಮೂರ್ತಿ, ತಾಲೂಕು ಅಧ್ಯಕ್ಷ ಬಿ.ಆರ್.ವೆಂಕಟೇಶ್, ಪುರಸಭೆ ಅಧ್ಯಕ್ಷ ಸಿ.ಪಿ.ನಾಗರಾಜು, ಸದಸ್ಯರಾದ ವೇಮನ, ಶ್ರೀವಳ್ಳಿ, ಗೀತಾ, ಭಾರತಮ್ಮ ಮತ್ತಿತರರಿದ್ದರು.