ಬೆಳಗಾವಿ: ಬಿಜೆಪಿ ನಾಯಕರ ನಡುವೆ ಪದೇಪದೆ ಸಂವಹನ ಹಾಗೂ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ಗುರುವಾರ ವಿಧಾನಸಭೆ ಕಲಾಪದ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಪ್ರಹಾರಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸುವಲ್ಲಿ ತಬ್ಬಿಬ್ಟಾದ ಪ್ರಸಂಗ ನಡೆಯಿತು.
ಲಾಠಿ ಪ್ರಹಾರ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಪಟ್ಟು ಹಿಡಿದರೆ, ಸದನ ನಡೆಯುತ್ತಿರುವಾಗ ನಡೆದ ಘಟನೆ ಬಗ್ಗೆ ಸರಕಾರ ಸ್ವಯಂಪ್ರೇರಿತ ಹೇಳಿಕೆ ದಾಖಲಿಸಬೇಕು ಎಂದು ವಿ. ಸುನೀಲ್ ಕುಮಾರ್ ಆಗ್ರಹಿಸಿದರು.
ಇದೇ ವಿಚಾರವಾಗಿ ಗೃಹ ಸಚಿವರು ಹೇಳಿಕೆ ದಾಖಲಿಸಿದರು. ಅನಂತರ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್ ಮಾತನಾಡುವಾಗ, ಪ್ರತಿಭಟನೆಗೆ ಬಿಜೆಪಿಯವರು ಪ್ರಚೋದನೆ ಕೊಟ್ಟಿದ್ದಾರೆ. ಆರೆಸ್ಸೆಸ್‌ನವರು ಕರೆ ತಂದು ಕಲ್ಲು ಹೊಡೆಸಿದ್ದಾರೆ ಎನ್ನುತ್ತಿದ್ದಂತೆ ಬಿ.ವೈ. ವಿಜಯೇಂದ್ರ ಅಸಮಾಧಾನ ಹೊರಹಾಕಿದರು. ಇದನ್ನು ಕಡತದಿಂದ ತೆಗೆಯಬೇಕು ಎಂದರು.
ಇದೇ ವೇಳೆ ಮತ್ತೋರ್ವ ಸಚಿವ ಕೃಷ್ಣ ಬೈರೇಗೌಡ ನೀಡುತ್ತಿದ್ದ ಉತ್ತರಕ್ಕೆ ಪ್ರತಿರೋಧ ಒಡ್ಡುವಲ್ಲಿ ಆರ್. ಅಶೋಕ್ ವ್ಯಸ್ತರಾಗಿದ್ದರು. ಸುನಿಲ್ ಕುಮಾರ್ ಕ್ರಿಯಾಲೋಪ ಎತ್ತಿದ್ದರು. ವಿಪಕ್ಷದ ನಾಯಕರೇ ಆರೆಸ್ಸೆಸ್ ಬಗೆಗಿನ ಶಬ್ದವನ್ನು ಕಡತದಿಂದ ತೆಗೆಸಿ, ರೀ ಅಶ್ವತ್ಥನಾರಾಯಣ ಹೇಳಿ ಅವರಿಗೆ ಎಂದು ವಿಜಯೇಂದ್ರ ಹಲವು ಬಾರಿ ಕೂಗಿ ಹೇಳಿದರೂ ಯಾರ ಗಮನಕ್ಕೂ ಹೋಗಲಿಲ್ಲ. ಅಷ್ಟರಲ್ಲಿ ಕಲಾಪವೂ ಮುಂದೂಡಿಕೆಯಾಯಿತು.
ಸ್ಪೀಕರ್‌ನ ಪ್ರಶ್ನೆ ಮಾಡೋಣ ಎಂದು ಅಶೋಕ್ ಅವರಿಗೆ ಸುನಿಲ್ ಹೇಳಿದರೆ, ವಿಜಯೇಂದ್ರ ಅವರು ಆರೆಸ್ಸೆಸ್ ವಿಚಾರ ಕಡತದಿಂದ ತೆಗೆಸುವುದಲ್ಲವೇ? ಎಂದರು. ಒಬ್ಬೊಬ್ಬರು ಒಂದೊಂದು ವಿಚಾರ ಹೇಳಿದರೆ ಹೇಗೆ ಎಂದು ಸ್ವಪಕ್ಷೀಯರ ಮೇಲೆಯೇ ಅಶೋಕ್ ಗರಂ ಆದರು. ಅದೇ ಬಿಸಿಯಲ್ಲಿ ಸ್ಪೀಕರ್ ಕೊಠಡಿಯತ್ತ ತೆರಳಿದ ಸುನಿಲ್ ಕುಮಾರ್ ಜತೆಗೆ ಅಶೋಕ್, ವಿಜಯೇಂದ್ರ ಎಲ್ಲರೂ ಹೆಜ್ಜೆ ಹಾಕಿದರು. ಒಟ್ಟಾರೆ ಬಿಜೆಪಿ ನಾಯಕರ ನಡುವಿನ ಗೊಂದಲಗಳು ಅಲ್ಲಲ್ಲಿ ಪ್ರಕಟವಾದವು.
ಪದೇ ಪದೆ ಆರೆಸ್ಸೆಸ್ ಚರ್ಚೆ ಬೇಡ. ಅದೊಂದು ಅಸಾಂವಿಧಾನಿಕ ಶಬ್ದ ಎನ್ನುವುದಾದರೆ ತೆಗೆದುಬಿಡೋಣ.
– ಡಾ| ಜಿ. ಪರಮೇಶ್ವರ್, ಗೃಹ ಸಚಿವ