Advertisement

ಸಮ ಬಲದ ನಡುವೆ ಗೆಲುವು ಯಾರಿಗೆ? ಕಾಂಗ್ರೆಸ್‌ನಿಂದ ಕಾಶಪ್ಪನವರ –ಬಿಜೆಪಿಯಿಂದ ವೀರೇಶ

01:32 PM Oct 22, 2020 | sudhir |

ಬಾಗಲಕೋಟೆ: ಜಿಲ್ಲೆಯ ಆಯಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಹುನಗುಂದ ಪಿಕೆಪಿಎಸ್‌ ಕ್ಷೇತ್ರ ಬಲಾಬಲ ಪ್ರದರ್ಶನದ ಮೂಲಕ ಗಮನ ಸೆಳೆದಿದೆ.
ಇದೊಂದು ಸಹಕಾರಿ ಕ್ಷೇತ್ರದ ಚುನಾವಣೆಯಾದರೂ, ಪಕ್ಕಾ ರಾಜಕೀಯ ಪ್ರತಿಷ್ಠೆ ನುಸುಳಿದೆ. ರಾಜಕೀಯ ಬದ್ಧ ವೈರಿಗಳಂತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಜಿಪಂ ಸದಸ್ಯ ವೀರೇಶ ಉಂಡೋಡಿ ಇಲ್ಲಿ ಪರಸ್ಪರ
ಎದುರಾಳಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಇತರೆ ಪಿಕೆಪಿಎಸ್‌ ಗಳಿಗಿಂತ, ಹುನಗುಂದ ಪಿಕೆಪಿಎಸ್‌ ಕ್ಷೇತ್ರದ ಚುನಾವಣೆ ಹ್ಯಾಂಗ್‌ ನಡೆದೈತ್ರಿ.. ಎಂದು ಬಹುತೇಕರು ಕುತೂಹಲದಿಂದ ಕೇಳುತ್ತಿದ್ದಾರೆ.

Advertisement

ಇಳಿದ ಕಾಂಗ್ರೆಸ್‌ ಸಂಖ್ಯಾ ಬಲ !: ಡಿಸಿಸಿ ಬ್ಯಾಂಕ್‌ ಚುನಾವಣೆ ಯಾವಾಗ ಘೋಷಣೆ ಆಯಿತೋ ಆಗಲೇ ಹುನಗುಂದ ತಾಲೂಕಿನಲ್ಲಿ ಸಹಕಾರ ರಾಜಕೀಯ ಅತ್ಯಂತ ಪ್ರತಿಷ್ಠೆಯಿಂದ ನಡೆದಿವೆ. ಕಳೆದ ಚುನಾವಣೆಯಲ್ಲಿ ಒಟ್ಟು 35 ಮತಗಳಲ್ಲಿ ಕಾಶಪ್ಪನವರ 23 ಮತ ಪಡೆದು ಆಯ್ಕೆಗೊಂಡಿದ್ದರು. ಕಳೆದ ಎರಡು ತಿಂಗಳ ಹಿಂದಷ್ಟೇ ಹುನಗುಂದ ತಾಲೂಕಿನ ಒಟ್ಟು
26 ಪಿಕೆಪಿಎಸ್‌ಗಳಲ್ಲಿ 18 ಸಂಘಗಳಲ್ಲಿ ಕಾಂಗ್ರೆಸ್‌ ಬೆಂಬಲಿತರ ಆಡಳಿತವಿತ್ತು. ಕೇವಲ 8 ಕಡೆ ಮಾತ್ರ ಬಿಜೆಪಿಯವರ ಆಡಳಿತವಿತ್ತು. ಆದರೆ, ಚುನಾವಣೆ ಘೋಷಣೆ ಬಳಿಕ ಮತದಾನದ ಹಕ್ಕು ಪಡೆಯುವ ಠರಾವು ನಿರ್ಣಯ ಕೈಗೊಳ್ಳುವ ವೇಳೆ ಹಲವು ರೀತಿಯ ಬಲಾಬಲ, ಪ್ರತಿಷ್ಠೆ ಹಾಗೂ ಒಳ ರಾಜಕೀಯ ಇಲ್ಲಿ ನಡೆದಿವೆ. ಹೀಗಾಗಿ 18 ಸಂಘಗಳ ಬಲವಿದ್ದ ಕಾಂಗ್ರೆಸ್‌ಗೆ ಈಗ 13 ಸಂಘಗಳ ಬಲವಿದೆ. 8 ಸಂಘಗಳ ಬಲವಿದ್ದ ಬಿಜೆಪಿ ಈಗ 13ಕ್ಕೇರಿದೆ. 13 ಸಂಘಗಳ ಬಲ ಪಡೆದ ಬಿಜೆಪಿ, ಇನ್ನೆರಡು ಸಂಘಗಳ ಬಲ ಪಡೆದು, ಗೆಲ್ಲಬೇಕೆಂಬ ಗುರಿಯಲ್ಲಿದೆ. ಇದಕ್ಕೆ ನವಲಿಹಿರೇಮಠರ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :ಕುಂದಗೋಳ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಎಸ್ ಅಕ್ಕಿ ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್‌ ಬೆಂಬಲಿತರ ಆಡಳಿತವಿದ್ದ ಮೂಗನೂರ, ಸೂಳಿಭಾವಿ, ಇದ್ದಲಗಿ ಸಹಿತ ಐದು ಪಿಕೆಪಿಎಸ್‌ಗಳ ಬಲ, ಬಿಜೆಪಿಗೆ ದೊರೆತಿದ್ದು, ಕಾಂಗ್ರೆಸ್‌ಗೆ 18ಕ್ಕಿದ್ದ ಬಲ 13ಕ್ಕೆ ಇಳಿದಿದೆ.

3ನೇ ಬಾರಿ ಗೆದ್ದ ಕಾಶಪ್ಪನವರ: ಡಿಸಿಸಿ ಬ್ಯಾಂಕ್‌ಗೆ ಹುನಗುಂದ ಪಿಕೆಪಿಎಸ್‌ ಕ್ಷೇತ್ರಕ್ಕೆ 2005ರಿಂದ ಚುನಾವಣೆ ನಡೆಯುತ್ತಿದೆ. 2005ರಲ್ಲಿ ಎಲ್‌.ಎಂ. ಪಾಟೀಲ ಮತ್ತು ವಿಜಯಾನಂದ ಕಾಶಪ್ಪನವರ ಪರಸ್ಪರ ಎದುರಾಗಿದ್ದರು. ಆಗ ಎಲ್‌. ಎಂ. ಪಾಟೀಲರು ಗೆದ್ದರು. ಬಳಿಕ 2010ರಲ್ಲಿ ಬಿಜೆಪಿಯ ಶಿವನಗೌಡ ಅಗಸಿಮುಂದಿನ ಹಾಗೂ  ವಿಜಯಾನಂದ ಕಾಶಪ್ಪನವರ ಎದುರಾಳಿ ಆದಾಗಲೂ ಕಾಶಪ್ಪನವರ ಪರಾಭವಗೊಂಡಿದ್ದರು. ಮುಂದೆ 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಶಾಸಕರಾಗಿದ್ದ ಕಾಶಪ್ಪನವರ, 2015ರಲ್ಲಿ ನಡೆದ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಹಲವು ರೀತಿಯ ತಂತ್ರಗಾರಿಕೆ, ರಾಜಕೀಯ ಚಾಣಾಕ್ಷéತನದ ಮೂಲಕ 23 ಮತಗಳ ಅಂತರದಿಂದ ಗೆದ್ದಿದ್ದರು. ಈಗ ಪುನಃ ಸ್ಪರ್ಧೆ ಮಾಡಿದ್ದು, ಅವರ ಗೆಲುವು ತಡೆಯಲು ಡಿಸಿಸಿ ಬ್ಯಾಂಕ್‌ ಪಡಸಾಲೆಯಿಂದಲೇ ಸಹಕಾರದ ಒಳ ರಾಜಕೀಯ ನಡೆಯುತ್ತಿದೆ ಎನ್ನಲಾಗಿದೆ.

Advertisement

ಇದನ್ನೂ ಓದಿ:ಕೆಲಸಕ್ಕೆ ಹೋಗಿ ಬೆಣ್ಣೆಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ರೈತ : ರಕ್ಷಣಾ ತಂಡದಿಂದ ರಕ್ಷಣೆ

ಇಬ್ಬರ ತಂದೆ ಅತ್ಯಾಪ್ತರು!: ಸದ್ಯ ಹುನಗುಂದ ಕ್ಷೇತ್ರದ ರಾಜಕೀಯ ಬದ್ಧ ವಿರೋಧಿಗಳಾಗಿರುವ ಜಿಪಂ ಸದಸ್ಯ ವೀರೇಶ ಉಂಡೋಡಿ ಮತ್ತು ವಿಜಯಾನಂದ ಕಾಶಪ್ಪನವರ ಅವರಿಬ್ಬರ ತಂದೆಯಂದಿರುವ ಪರಸ್ಪರ ಅತ್ಯಾಪ್ತರಾಗಿದ್ದರು. 1999ರ ಚುನಾವಣೆಯಲ್ಲಿ ವೀರೇಶ ಅವರ ತಂದೆ ಸಿದ್ದಣ್ಣ ಉಂಡೋಡಿ, ವಿಜಯಾನಂದ ಅವರ ತಂದೆ ಎಸ್‌.ಆರ್‌. ಕಾಶಪ್ಪನವರ
ಪರಸ್ಪರ ವಿರೋಧಿಗಳಾಗಿದ್ದರು. ಮುಂದೆ ಅವರಿಬ್ಬರೂ ಮತ್ತೆ ಒಂದಾಗಿ, ಗೆಳೆತನ ಮುಂದುವರಿಸಿದ್ದರು.

ಆದರೆ, ಅವರಿಬ್ಬರ ಪುತ್ರರೀಗ, ರಾಜಕೀಯ ಬದ್ಧ ವಿರೋಧಿಗಳಾಗಿದ್ದು, ಪ್ರತಿಯೊಂದು ಚುನಾವಣೆಯಲ್ಲಿ ರಾಜಕೀಯ ಪ್ರತಿಷ್ಠೆ ಜೋರಾಗಿರುತ್ತದೆ.

ಸಮಬಲದಲ್ಲಿ ಗೆಲುವು ಯಾರಿಗೆ?: ಈ ಬಾರಿ ಬಿಜೆಪಿಯಿಂದ ವೀರೇಶ ಉಂಡೋಡಿ, ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಡಿಸಿಸಿ ಬ್ಯಾಂಕ್‌ಗೆ ಸ್ಪರ್ಧಿಸಿದ್ದು, ಇಬ್ಬರ ಬಳಿಯೂ ತಲಾ 13 ಸಂಘಗಳ ಮತಗಳ ಬಲವಿದೆ. ಇನ್ನೊಂದು ಸಂಘದ
ಬಲ ಪಡೆಯಲು ಎರಡೂ ಕಡೆಯಿಂದ ಹಲವು ರೀತಿಯ ತಂತ್ರ ನಡೆಯುತ್ತಿವೆ. ಎಷ್ಟೇ ಖರ್ಚಾದರೂ ಪರವಾಗಿಲ್ಲ, ಒಂದು ಸಂಘದ ಬಲ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಂತ ವಾತಾವರಣವಿದೆ. ಯಾರ ಕಡೆಯಿಂದ ಹೆಚ್ಚಿನ ಭರವಸೆ ಸಿಗುತ್ತೋ, ಡಿಸಿಸಿ ಬ್ಯಾಂಕ್‌ನ ಜಿಲ್ಲಾ ನಾಯಕರು, ಪಕ್ಷ ರಾಜಕೀಯ ನಾಯಕರ ಪ್ರಬಲ ಇಚ್ಛಾಶಕ್ತಿ ಇಲ್ಲಿ ಪ್ರದರ್ಶನಗೊಂಡರೆ ಮಾತ್ರ ಅವರ
ಆಯ್ಕೆ ಸುಲಭ ಸಾಧ್ಯ ಎನ್ನಲಾಗಿದೆ.

ಕಾಶಪ್ಪನವರಿಗೆ ಗೆಲುವು ಸುಲಭವಲ್ಲ: ತಮ್ಮ ಮಾತು, ನಡಿವಳಿಕೆಯಿಂದ ಒಂದಷ್ಟು ಜನರನ್ನು ಗಳಿಸಿಕೊಂಡರೆ, ಅಷ್ಟೇ ರಾಜಕೀಯ ವಿರೋಧಿಗಳನ್ನೂ ಮಾಜಿ ಶಾಸಕ ಕಾಶಪ್ಪನವರ ಕಟ್ಟಿಕೊಂಡಿದ್ದಾರೆ. ಹೊಂದಾಣಿಕೆ-ಒಳ ರಾಜಕೀಯ ಚಾಣಾಕ್ಷತನ ಮಾಡದೇ ನೇರವಾಗಿ ಹುಂಬತನದ ರಾಜಕೀಯ ಮಾಡುತ್ತಾರೆ ಎಂಬುದು ಅವರಿಗಿರುವ ಮೈನಸ್‌ ಪಾಯಿಂಟ್‌. ಇದುವೇ
ಅವರಿಗೆ ಹಲವು ಬಾರಿ, ಹಲವರ ವಿರೋಧಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ಯುವಕ

18 ಬಲದಿಂದ 13ಕ್ಕೆ ಇಳಿದ ಇಲ್ಲಿನ ಕಾಂಗ್ರೆಸ್‌ ಬಲ ಡಿಸಿಸಿ ಬ್ಯಾಂಕ್‌ನ ಚುನಾವಣೆಯಲ್ಲಿ ಕಾಶಪ್ಪನವರ ಗೆಲ್ಲಲು ಮಾಜಿ ಸಚಿವ ಎಚ್‌.ವೈ. ಮೇಟಿ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ನಂಜಯ್ಯನಮಠ ಅವರ ಪೂರ್ಣ ಪ್ರಮಾಣದ
ಇಚ್ಛಾಶಕ್ತಿ ಅಗತ್ಯವಿದೆ. ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಎಂಟ್ರಿ ಆದರೆ ಮಾತ್ರ ಕಾಶಪ್ಪನವರ ಗೆಲುವು ಸಾಧ್ಯ ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಆದರೆ ಬಿಜೆಪಿಯ ವೀರೇಶ ಉಂಡೋಡಿ, ಶಾಸಕ ದೊಡ್ಡನಗೌಡರ ಅಧಿಕಾರ-ಪ್ರಭಾವದ ಬಲ, ಸಮಾಜದ ನಾಯಕರ ಬಲದೊಂದಿಗೆ ಗೆಲುವು ಸಾಧಿಸುವ ಉಮೇದಿಯಲ್ಲಿದ್ದಾರೆ. ಹುನಗುಂದ ಪಿಕೆಪಿಎಸ್‌ ಕ್ಷೇತ್ರಕ್ಕೂ, ಇಳಕಲ್ಲ ಪಿಕೆಪಿಎಸ್‌ ಕ್ಷೇತ್ರಕ್ಕೂ
ರಾಜಕೀಯ ನಂಟು ಬೆಳೆಸಿ, ಗೆಲ್ಲುವ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್‌ನ ಕಾಶಪ್ಪನವರ ಇದ್ದಾರೆ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next