Advertisement

ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಬಿಜೆಪಿ ಬದ್ಧ

07:18 PM Oct 11, 2020 | Suhan S |

ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡಗಳ ಸಮುದಾಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ ಹೇಳಿದರು.

Advertisement

ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು. ದೇಶ ಹಾಗೂ ರಾಜ್ಯದಲ್ಲಿ 6-7 ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌ ಎಂದೆಂದಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ, ಮೇಲೆ ಎತ್ತುವಂತಹಕೆಲಸ ಮಾಡಲೇ ಇಲ್ಲ ಎಂದು ದೂರಿದರು.

2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ 25ಕ್ಕೂ ಹೆಚ್ಚು ಶಾಸಕರು ದಲಿತರ ಕಾಲೋನಿ, ತಾಂಡಾಗಳ ಪರಿಸ್ಥಿತಿ ಅವಲೋಕನ ನಡೆಸಿದ ಸಂದರ್ಭದಲ್ಲಿ ಅನೇಕ ಕಡೆ ರಸ್ತೆ, ಚರಂಡಿ, ಸಮುದಾಯ ಭವನ ಒಳಗೊಂಡಂತೆ ಯಾವುದೇ ಸೌಲಭ್ಯಗಳು ಇರಲಿಲ್ಲ. ಸಾವಿರಾರು ಕೋಟಿ ಅನುದಾನದಲ್ಲಿ ಆಂಬೇಡ್ಕರ್‌, ಸೇವಾಲಾಲ್‌ ಸಮುದಾಯ ಭವನ, ರಸ್ತೆ ನಿರ್ಮಾಣ, ಸಾಕಷ್ಟು ಜೀರ್ಣೋದ್ಧಾರ ಕೆಲಸಗಳನ್ನು ಮಾಡಲಾಯಿತು. ಕಾಂಗ್ರೆಸ್‌ಗೆ ಅಂತಹ ಆಲೋಚನೆಯೇ ಇರಲಿಲ್ಲ ಎಂದರು.

ಪ್ರಧಾನಮಂತ್ರಿ ಉಜ್ವಲ ಯೋಜನೆ ಮೂಲಕ ಸಾವಿರಾರು ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್‌ ಸಿಲಿಂಡರ್‌, ಒಲೆ ನೀಡಲಾಗಿದೆ. ದಶಕಗಳ ಕಾಲ ಆಡಳಿತ ನಡೆಸಿದಂತಹವರಿಗೆ ಗ್ಯಾಸ್‌, ಒಲೆ ಕೊಡಿಸುವ ನಿಟ್ಟಿನಲ್ಲಿ ಗಮನ ಇರಲಿಲ್ಲವೇ ಎಂದು ಪ್ರಶ್ನಿಸಬೇಕಾಗುತ್ತದೆ. ದಲಿತ ಸಮುದಾಯವರುಬ್ಯಾಂಕ್‌ಗಳಲ್ಲಿ ಅಕೌಂಟ್‌ ಹೊಂದಿರದ ಸ್ಥಿತಿಯೂ ಇತ್ತು. ಪ್ರಧಾನಮಂತ್ರಿ ಜನ್‌ಧನ್‌ ಯೋಜನೆ ಮೂಲಕ ದಲಿತ ಸಮುದಾಯದವರು ಸಹ ಬ್ಯಾಂಕ್‌ ಖಾತೆಗಳನ್ನು ಹೊಂದುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಅತಿ ಹೆಚ್ಚು ಅನುದಾನನೀಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಎಚ್‌. ಹನುಮಂತ ನಾಯ್ಕ ಮಾತನಾಡಿ, ಬಿಜೆಪಿ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ನೀಡುತ್ತಿರುವ ಅನುದಾನ, ಯೋಜನೆ, ಸೌಲಭ್ಯಗಳ ಬಗ್ಗೆ ಸರ್ವರಿಗೂ ಮಾಹಿತಿ ನೀಡಬೇಕು. ಬೂತ್‌, ವಾರ್ಡ್‌ ಮಟ್ಟದಲ್ಲೂ ಪಕ್ಷವನ್ನು ಇನ್ನೂ ಹೆಚ್ಚು ಸದೃಢಗೊಳಿಸ ಬೇಕು ಎಂದು ಕರೆ ನೀಡಿದರು.

Advertisement

ಎಸ್ಸಿ ಮೋರ್ಚಾ ಹಿರಿಯ ಮುಖಂಡ ಕೆ.ಎನ್‌. ಓಂಕಾರಪ್ಪ ಮಾತನಾಡಿ, ಮುಳ್ಳಿನ ನಡುವೆ ಇರುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರು ಸಂಘಟನೆ, ಒಗ್ಗಟ್ಟಿನ ಮೂಲಕ ಸಮಾಜದಲ್ಲಿ ಹೂವಾಗಿ ಅರಳಬೇಕು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಇತರರಿಗೂ ತಲುಪಿಸುವಂತಾಗಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ಮಂಜಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್‌ ನಾವೇ ನಿಜವಾದ ಅಂಬೇಡ್ಕರ್‌ ಅನುಯಾಯಿಗಳು ಎನ್ನುವಂತೆ ವರ್ತಿಸುತ್ತಿತ್ತು. ಅದೇ ಕಾಂಗ್ರೆಸ್‌ 1952, 1957ರ ಚುನಾವಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಸೋಲಿಸಿತ್ತು. ದೆಹಲಿಯಲ್ಲಿ ಅವರ ಅಂತ್ಯಕ್ರಿಯೆಗೂ ಜಾಗ ನೀಡಲಿಲ್ಲ. ಪ್ರಧಾನಿ ಮೋದಿಯವರು ಅಂಬೇಡ್ಕರ್‌ ಜನ್ಮಸ್ಥಳ, ಲಂಡನ್‌ ನಲ್ಲಿದ್ದ ಮನೆ, ಮುಂಬೈನಲ್ಲಿನ ಸಮಾಧಿಯನ್ನ ಸ್ಮಾರಕ ಮಾಡಿದರು ಎಂದು ತಿಳಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಎಂ. ರವಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಲ್‌. ಆರ್‌. ಶಿವಪ್ರಕಾಶ್‌, ಬಿ.ಜಿ. ಸಂಗಜ್ಜಗೌಡ್ರು, ಕೆ.ಎನ್‌. ಹನುಮಂತಪ್ಪ, ಗಂಗಾಧರ, ದುರುಗಪ್ಪ, ಟಿ.ಎಂ. ಕೊಟ್ರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next