Advertisement

BJP: ವಿಪಕ್ಷ ನಾಯಕನ ಆಯ್ಕೆ- ನಾಳೆ ಅರುಣ್‌ ಸಿಂಗ್‌ ಆಗಮನ

11:43 PM Jun 06, 2023 | Pranav MS |

ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆ ವಿಚಾರವೂ ಸೇರಿ ಕೆಲವು ಸಂಘಟನಾತ್ಮಕ ನಿರ್ಧಾರಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಜೂ. 8ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

Advertisement

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಅನಂತರ ಇದುವರೆಗೆ ಕೇಂದ್ರದ ಯಾವುದೇ ನಾಯಕರೂ ಕರ್ನಾಟಕದತ್ತ ತಲೆ ಹಾಕಿರಲಿಲ್ಲ. ಪಕ್ಷದ ವೇದಿಕೆಯಲ್ಲಿ ಒಮ್ಮೆ ಮಾತ್ರ ಪರಾಮರ್ಶೆ ಸಭೆ ನಡೆದಿತ್ತು. ಆದರೆ ಇದು ರಾಷ್ಟ್ರೀಯ ನಾಯಕರ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.
ಅರುಣ್‌ ಸಿಂಗ್‌ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮೊದಲು ಗೆದ್ದ ಶಾಸಕರಿಗೆ ಅಭಿನಂದನೆ, ಅನಂತರ ಸೋತ ಕ್ಷೇತ್ರಗಳ ಬಗ್ಗೆ ಅವಲೋಕನ ನಡೆಯಲಿದೆ. ಆ ಬಳಿಕ ಸಂಘಟನಾತ್ಮಕ ವಿಚಾರಕ್ಕೆ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಣೆ ನಡೆಯಲಿದೆ. ಬಿಜೆಪಿ ಮೂಲಗಳ ಪ್ರಕಾರ ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆಯುವ ಮೊದಲ ಹಂತದ ಸಭೆ ಇದಾಗಿರಲಿದೆ.

ವಿಪಕ್ಷ ನಾಯಕ ಯಾರಾಗಬೇಕೆಂಬ ವಿಚಾರದಲ್ಲಿ ಬಿಜೆಪಿಯಲ್ಲೇ ಸಾಕಷ್ಟು ಗೊಂದಲಗಳಿವೆ. ಕೆಲವು ಶಾಸಕರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೇ ಮುಂದುವರಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಕಾರ್ಯಕರ್ತರ ಮಟ್ಟದಲ್ಲಿ ಈ ಬಗ್ಗೆ ಭಾರೀ ವಿರೋಧವಿದೆ. ಸಂಸದರು ಹಾಗೂ ಉತ್ತರ ಕರ್ನಾಟಕ ಭಾಗದ ಶಾಸಕರು ಬೊಮ್ಮಾಯಿ ಬದಲು ಬೇರೆ ಲಿಂಗಾಯತ ಮುಖಂಡರಿಗೆ ಅವಕಾಶ ನೀಡಬೇಕೆಂದು ಪ್ರತಿಪಾದಿಸುತ್ತಿವೆ. ಆದರೆ ಹೈಕಮಾಂಡ್‌ ಈ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.

ರಾಜ್ಯಾಧ್ಯಕ್ಷರ ನೇಮಕ ವಿಚಾರ ಇನ್ನಷ್ಟು ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ಸರಕಾರದ 9ನೇ ವರ್ಷದ ಕಾರ್ಯಕ್ರಮ, ರಾಜ್ಯ ಪ್ರವಾಸ ಮುಕ್ತಾಯವಾಗುವವರೆಗೂ ನಳಿನ್‌ ಕುಮಾರ್‌ ಕಟೀಲು ಅವರೇ ಮುಂದುವರಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next