ಬೆಂಗಳೂರು: ಪಂಚರತ್ನ ರಥಯಾತ್ರೆ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು “ವಿಜಯ ಸಂಕಲ್ಪ’ ಯಾತ್ರೆ ಮಾಡುವ ಬದಲು “ಸಿ.ಡಿ. ಸಂಕಲ್ಪ ಯಾತ್ರೆ’ ಮಾಡಿದರೆ ಲೇಸು ಎಂದು ಕುಟುಕಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರ ಸಚಿವರು ತಾವು ಕೂತಿರುವ ಹುದ್ದೆಯ ಘನತೆಯನ್ನು ಮರೆತು ಮಾತನಾಡಿದ್ದಾರೆ. ಅವರಿಗೆ ಅವರದೇ ಭಾಷೆಯಲ್ಲಿ ಪ್ರತಿಕ್ರಿಯಿಸ ಬೇಕಾಗುತ್ತಿದೆ ಎಂದರು.
ಬಿಜೆಪಿಯವರು ಸಿ.ಡಿ. ಸಂಕಲ್ಪ ಅಂತ ಹೆಸರಿಟ್ಟು ಹೋದರೆ ನಾನು ನವಗ್ರಹ ಅಂತ ಹೆಸರು ಬದಲಾಯಿಸುತ್ತೇವೆ. ಕೇಂದ್ರದ ಮಂತ್ರಿಯಾಗಿ ಅವರು ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದ್ದಾರೆ. ಅದೇ ಧೂಳು ಮಿಶ್ರಿತ ರಸ್ತೆಗಳು, ಸ್ವತ್ಛತೆ ಇಲ್ಲದ ಗ್ರಾಮಗಳನ್ನು ಅವರು ನೋಡಿಲ್ಲವೇ? ಅವರ ಸರಕಾರದ ಸ್ವತ್ಛ ಭಾರತದ ಹಣೆಬರಹ ಏನಾಗಿದೆ ಎನ್ನುವುದನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಬಂದು ನೋಡಲಿ ಎಂದರು.
ದೇವೇಗೌಡರ ಕುಟುಂಬ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಹಾಗೆಯೇ ನಿಮ್ಮ ಕುಟುಂಬದ ಹಣೆಬರಹ ಏನು ಎನ್ನುವುದು ಜನತೆಗೆ ಗೊತ್ತಿದೆ. ಬ್ಯಾಂಕ್‌ಗಳನ್ನು ನುಂಗಿ ನೀರು ಕುಡಿದಿರುವ ನಿಮ್ಮ ಸಹೋದರನ ಕಥೆ ಯಾರಿಗೆ ಗೊತ್ತಿಲ್ಲ? ಅಂಥ ವಂಚನೆಯ ಕೆಲಸವನ್ನು ನಮ್ಮ ಕುಟುಂಬ ಮಾಡಿಲ್ಲ ಎಂದು ಜೋಷಿ ವಿರುದ್ಧ ಗುಡುಗಿದರು.
Related Articles
ಜೆಡಿಎಸ್ ಸೇರಿದ ನ್ಯಾಯಾಧೀಶರು
ಚಿತ್ತಾಪುರದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಗಿ ಸ್ವಯಂ ನಿವೃತ್ತಿ ಹೊಂದಿದ ಸುಭಾಷ್ ಚಂದ್ರ ರಾಥೋಡ್ ಅವರು ಇಂದು ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪಕ್ಷ ಸೇರಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ರಾಥೋಡ್ ಅವರಿಗೆ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರ ಮಾಡಿಕೊಂಡರು. ರಾಥೋಡ್ ಅವರಿಗೆ ಇನ್ನೂ ಸೇವಾವಧಿ ಇತ್ತು. ಆದರೂ ಜನಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರಿಗೆ ಚಿತ್ತಾಪುರ ಟಿಕೆಟ್ ನೀಡಲಾಗುವುದು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಅರಕಲಗೂಡು ಎ. ಮಂಜುಗೆ ಹಾಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇ ಗೌಡರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಸಭೆ ಕರೆದಾಗ ಅವರು ಬಂದಿಲ್ಲ. ಎರಡು ವರ್ಷಗಳಿಂದ ಅವರು ಪಕ್ಷದಿಂದ ದೂರ ಇದ್ದಾರೆ. ಅರಕಲಗೂಡು ಕ್ಷೇತ್ರದ ವಿಚಾರದಲ್ಲಿ ಈಗಾಗಲೇ ಎ.ಮಂಜು ಜತೆ ಮಾತಾಡಿದ್ದೇನೆ. ರೇವಣ್ಣ ಅವರು ಕೂಡ ಮಂಜು ಜತೆ ಮಾತಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.