ಮಂಗಳೂರು: ಚುನಾವಣ ಪೂರ್ವ ತಯಾರಿಯನ್ನು ಬಿಜೆಪಿ ಈಗಾಗಲೇ ಮಾಡಿದೆ. ಸಾರ್ವಜನಿಕ ಸಭೆ, ಯಾತ್ರೆ, ಮನೆ ಮನೆ ಭೇಟಿ, ಬೂತ್ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ, ವಿಜಯ ಸಂಕಲ್ಪ ಯಾತ್ರೆ ಮುಗಿಸಿದ್ದೇವೆ. ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಪ್ರತೀ ಬಾರಿ ಚುನಾವಣೆ ಘೋಷಣೆ ಆದ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಈ ಬಾರಿಯೂ ಅದೇ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರಿಗೆ ಅವರು ತಿಳಿಸಿದರು.
ಕೆಲವು ಶಾಸಕರನ್ನು ಕೈಬಿಡುವ ಬಗ್ಗೆ ಅಥವಾ ಅವರನ್ನೇ ಅಭ್ಯರ್ಥಿ ಮಾಡುವ ಸಂಸದೀಯ ಮಂಡಳಿ ನಿರ್ಧಾರ ಮಾಡಲಿದೆ ಎಂದ ಅವರು, ಚುನಾವಣ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು, ಇತರ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು ಬರಲಿದ್ದಾರೆ. ಸಾರ್ವಜನಿಕ ಸಭೆಗಳು, ರೋಡ್ ಶೋಗಳು, ಮನೆ ಮನೆ ಪ್ರಚಾರ ಮಾಡಲಿದ್ದೇವೆ ಎಂದರು.