ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭಾನುವಾರ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು.
ಮುಖಂಡರಾದ ಜಿ.ಎಸ್. ಅನಿತ್‌ಕುಮಾರ್, ಮಾಜಿ ಮೇಯರ್ ಉಮಾ ಪ್ರಕಾಶ್, ಜಯಮ್ಮ, ಭಾಗ್ಯ ಪಿಸಾಳೆ, ಗ್ಯಾರಳ್ಳಿ ಶಿವಕುಮಾರ್, ಬಸವರಾಜ್, ಪ್ರವೀಣ್ ಮಧುರೈ, ಸಿಂಧು ಇತರರು ಇದ್ದರು.
ಒಂದೇ ಕುಟುಂಬಕ್ಕೆ ಟಿಕೆಟ್ ಸಾಕೇ?: ರಾಜಕೀಯ ಪಕ್ಷಗಳು ಒಂದೇ ಕುಟುಂಬಗಳಿಗೆ ಕೆಂಪು ಹಾಸು ಹಾಕುವುದನ್ನು ವಿರೋಧಿಸುವ ಕಿಡಿಯನ್ನು ಮೊದಲು ಹೊತ್ತಿಸಿದ್ದು ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ. ಸಂಸದ ಸಿದ್ದೇಶ್ವರ ಕುಟುಂಬದವರಿಗೆ ಏಳು ಬಾರಿ ಟಿಕೆಟ್ ನೀಡಲಾಗಿದ್ದು ಆ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಿ ಎಂಬ ಕೂಗು ಎಬ್ಬಿಸಿದ್ದರು. ಪಕ್ಷ ಅದೇ ಕುಟುಂಬದವರಿಗೆ ಟಿಕೆಟ್ ಘೋಷಿಸಿದ್ದರಿಂದ ಸಿಟ್ಟಿಗೆದ್ದ ಮಾಜಿ ಸಚಿವರು, ಶಾಸಕರು, ಯುವ ಮುಖಂಡರು, ಕಾರ್ಯಕರ್ತರನ್ನು ಒಳಗೊಂಡ ಗುಂಪು ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಿದೆ. ಒಂದು ವೇಳೆ ಪಕ್ಷದ ವರಿಷ್ಠರು ಬಂಡಾಯ ಶಮನಗೊಳಿಸಿದರೂ ಈ ಬಣದ ಒಳಏಟಿನ ಆತಂಕವಂತೂ ಬಿಜೆಪಿಗೆ ಇದ್ದೇ ಇದೆ
ಒಂದೇ ಮನೆಗೆ ಮೂರು ಅಧಿಕಾರ ನೀಡಲು ಜನ ಒಪ್ಪುವುದಿಲ್ಲ. ಶಾಮನೂರು ಮನೆಯಲ್ಲಿ ಈಗಾಗಲೇ ಇಬ್ಬರು ಅಧಿಕಾರದಲ್ಲಿದ್ದಾರೆ. ಜಿ.ಎಂ. ಕುಟುಂಬದಲ್ಲಿ ಯಾರೂ ಅಧಿಕಾರದಲ್ಲಿಲ್ಲ. ಹೀಗಾಗಿ ಈ ಬಾರಿ ಜನ ಜಿ.ಎಂ. ಸೊಸೆಯಾದ ನನ್ನನ್ನೇ ಗೆಲ್ಲಿಸಲು ನಿರ್ಧರಿಸಿದ್ದಾರೆ.
–ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ