Advertisement

ರಾಜ್ಯದಲ್ಲೂ ಅರಳಲಿದೆ ಕಮಲ: ತೋಮರ್‌

10:37 AM Mar 23, 2018 | Team Udayavani |

ದಾವಣಗೆರೆ: ದೇಶದ 21 ರಾಜ್ಯಗಳಲ್ಲಿ ಕಮಲ ಅರಳಿರುವಾಗ ಕರ್ನಾಟಕದಲ್ಲಿ ಅರಳಲ್ಲ ಎಂಬುದು ಕಾಂಗ್ರೆಸ್ಸಿಗರ ಭ್ರಮೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಗಣಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದರು.

Advertisement

ಗುರುವಾರ, ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ವಿಶೇಷ ಸಭೆ ಉದ್ಘಾಟಿಸಿ, ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ಇಡೀ ಪ್ರಪಂಚ ಒಪ್ಪಿಕೊಳ್ಳುವಂತಿವೆ. ಇದೇ ಕಾರಣಕ್ಕೆ ಇಂದು ರಾಜ್ಯದ ಎಲ್ಲಾ ಕಡೆ ಕಮಲ ಅರಳುತ್ತಿದೆ. 21 ರಾಜ್ಯಗಳಲ್ಲಿ ನಮ್ಮ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಿದೆ. ಇಲ್ಲೂ ಸಹ ಇದು ಮುಂದುವರಿಯಲಿದೆ. ಬಿಜೆಪಿ ವಿಜಯಯಾತ್ರೆ  ಗ್ರೆಸ್ಸಿಗರಿಗೆ ಸಹಿಸಲಾಗುತ್ತಿಲ್ಲ ಎಂದರು.

ಕಳೆದ 4 ವರ್ಷದಲ್ಲಿ ಕೇಂದ್ರದಲ್ಲಿರುವ ನಮ್ಮ ಸರ್ಕಾರ ಭ್ರಷ್ಟಾಚಾರದ ಆರೋಪ ಇಲ್ಲದ ಆಡಳಿತ ನೀಡಿದೆ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಿದಾಗ ಹೇಳಿದಂತೆ ನಿಷ್ಠುರ ಆಡಳಿತ ನೀಡಿದ್ದಾರೆ. ದೇಶದಲ್ಲಿರುವ ಭ್ರಷ್ಟಾಚಾರ, ಅನಾಚಾರ ತೊಲಗಬೇಕು. ಆಡಳಿತಾತ್ಮಕ, ಭೌತಿಕ ಕೊಳೆ ಮುಕ್ತ ಆಗಬೇಕು. ಇದೇ ಕಾರಣಕ್ಕೆ ನನ್ನನ್ನು ಈ ಜನ ಆರಿಸಿದ್ದಾರೆ. ಅದರಂತೆ ನಾನು ನಡೆದುಕೊಳ್ಳುವೆ ಎಂದಿದ್ದರು. ಅದನ್ನು ನಾಲ್ಕು ವರ್ಷದಲ್ಲಿ ಸಾಬೀತು ಪಡಿಸಿದ್ದಾರೆ ಎಂದು ಅವರು ತಿಳಿಸಿದರು.

ಇಂದು ಪ್ರಾಪಂಚಿಕ ಮಟ್ಟದಲ್ಲೂ ನಮ್ಮ ರಾಷ್ಟ್ರಕ್ಕೆ ಹೆಗ್ಗಳಿಕೆ ತಂದುಕೊಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಮೊದಲೆಲ್ಲಾ ನಮ್ಮ ದೇಶದ ಪ್ರಧಾನಿ ವಿದೇಶಕ್ಕೆ ಹೋಗುವುದು ಗೊತ್ತೇ ಆಗುತ್ತಿರಲಿಲ್ಲ. ಇಂದು ನಮ್ಮ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ ಎಂದಾದರೆ ನಮ್ಮ ದೇಶ ಮಾತ್ರವಲ್ಲ, ವಿದೇಶದ ನಾಯಕರೂ ಸಹ ಮೋದಿ ಏನು ಮಾತನಾಡುತ್ತಾರೆ ಎಂಬುದನ್ನು ಕುತೂಹಲದಿಂದ ಎದುರು ನೋಡುತ್ತಾರೆ. ಇನ್ನು ದೇಶ ಇಬ್ಭಾಗ ಆದಾಗಿನಿಂದ ನಮ್ಮ ದೇಶದ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದ ಪಾಕಿಸ್ತಾನದ
ವಿರುದ್ಧ ಒಂದು ಪದ ಮಾತನಾಡುವಂತಿರಲಿಲ್ಲ. ಆದರೆ, ಇಂದು ಇಡೀ ಪ್ರಪಂಚವೇ ಪಾಕಿಸ್ತಾನವನ್ನು ದೂಷಿಸುವಂತಹ ಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ನರೇಂದ್ರ ಮೋದಿ ಕಾರಣ ಎಂದು ಅವರು ತಿಳಿಸಿದರು.

ಮೋದಿಯವರ ನಿಷ್ಪಕ್ಷಪಾತ, ಸ್ವತ್ಛ, ಪಾರದರ್ಶಕ ಆಡಳಿತ, ಅಭಿವೃದ್ಧಿ ಕಾರ್ಯದಿಂದ ಇಡೀ ದೇಶದ ಜನ ಅವರನ್ನು ಮೆಚ್ಚುತ್ತಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ಅವರನ್ನು ದ್ವೇಷಿಸುತ್ತಿದೆ. ಮೋದಿಯವರಿಂದಾಗಿ ದೇಶದ ಜನರು ಕಾಂಗ್ರೆಸ್‌ ಮರೆಯುತ್ತಿದ್ದಾರೆ. ಅಲ್ಲದೆ ಪಕ್ಷದ ನೇತಾರ ರಾಹುಲ್‌ ಗಾಂಧಿಗೆ ಯಾವುದೇ ಹೊಸ ವೇಷ ತೊಡಿಸಿದರೂ ಅದರ ಮೇಲೆ ಜನ ಜೋಕ್‌ ಮಾಡುವುದು ಬಿಡಲ್ಲ ಎಂದು ತೋಮರ್‌ ಲೇವಡಿ ಮಾಡಿದರು.

Advertisement

ಬಿಜೆಪಿ ಈ ಹಿಂದೆ ಅಧಿಕಾರದಲ್ಲಿದ್ದಾಗ ರೈತ, ಬಡ, ದಲಿತ, ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ. ವಾಜಪೇಯಿ ಪ್ರಧಾನಿಯಾದಾಗ ರೈತರಿಗೆ ಕ್ರೆಡಿಟ್‌ ಕಾರ್ಡ್‌ ನೀಡಿದರು. ನಮ್ಮ ಪ್ರಧಾನಿ ಫಸಲ್‌ ಬಿಮಾ ಯೋಜನೆ ಜಾರಿ ಮಾಡಿದರು. ಬೇವುಲೇಪಿತ ಯೂರಿಯಾ ಗೊಬ್ಬರ ಪರಿಚಯಿಸಿದರು. ಇನ್ನು ಹಲವು ಯೋಜನೆ ಜಾರಿ ಮಾಡಿದ್ದಾರೆ. ಕಾರ್ಯಕರ್ತರು ಜನರ ಬಳಿ ಹೋಗಿ ನಮ್ಮ ಕಾರ್ಯಕ್ರಮ ತಿಳಿಸಿ ಎಂದು ಅವರು ಸಲಹೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಕೇಂದ್ರದ ಹಲವು ಯೋಜನೆಗಳ ಅನುದಾನ ಬಳಕೆಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು. ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮಾತನಾಡಿದರು. ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಕುಂದಪ್ಪ, ಕ್ಷೇತ್ರದ ಉಸ್ತುವಾರಿ ದತ್ತಾತ್ರೇಯ, ಸಹ ಪ್ರಮುಖ್‌ ಜಿ.ಎಂ. ಸುರೇಶ್‌, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ, ಪಾಲಿಕೆ ಸದಸ್ಯ ಡಿ.ಕೆ. ಕುಮಾರ್‌ ವೇದಿಕೆಯಲ್ಲಿದ್ದರು.

ದಿನದ 24 ಗಂಟೆ ನೀರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ಅಮೃತ್‌ ಸಿಟಿ ಯೋಜನೆಯಡಿ ದಾವಣಗೆರೆ ಜನರಿಗೆ ವಾರದ 7ದಿನ, ದಿನದ 24 ತಾಸು ನೀರು ಒದಗಿಸುವ ಯೋಜನೆಗೆ ಫ್ರಾನ್ಸ್‌ ಸರ್ಕಾರದೊಂದಿಗೆ ಒಪ್ಪಂದ ಆಗಿದೆ. 274 ಕೋಟಿ ರೂ. ಅನುದಾನದ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಶೀಘ್ರ ಯೋಜನೆ ಕಾಮಗಾರಿ ಆರಂಭ ಆಗಲಿದೆ.
 ಜಿ.ಎಂ. ಸಿದ್ದೇಶ್ವರ್‌, ಸಂಸದ 

Advertisement

Udayavani is now on Telegram. Click here to join our channel and stay updated with the latest news.

Next