Advertisement

BJP; ಹುಬ್ಬಳ್ಳಿಯಲ್ಲಿ ಠಾಣೆ ಗೆ ನುಗ್ಗಲು ಯತ್ನ: ಆರ್.ಅಶೋಕ್ ಸೇರಿ ಹಲವರು ವಶಕ್ಕೆ

04:24 PM Jan 03, 2024 | Team Udayavani |

ಹುಬ್ಬಳ್ಳಿ: ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪೋಲಿಸ್ ಠಾಣಗೆ ನುಗ್ಗಲು ಯತ್ನಿಸಿದಾಗ ತಡೆದ ಪೊಲೀಸರು, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ 90 ಜನರನ್ನು ವಶಕ್ಕೆ ಪಡೆದರು.

Advertisement

ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಇಲ್ಲಿನ ಶಹರ ಪೊಲೀಸ್ ಠಾಣೆ ಎದರು ಪ್ರತಿಭಟನೆ ನಡೆಯಿತು. ಪ್ರತಿಭಟನೆ ಕೊನೆಯಲ್ಲಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಲು ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ವಿಧಾನಸಭೆ ಸದಸ್ಯರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನ ಕಾಯಿ, ಎಂ.ಆರ್ .ಪಾಟೀಲ, ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಹೊಸಸಿ .ಆರ್. ಮೈದಾನಕ್ಕೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.

ಇದಕ್ಕೂ ಮೊದಲು ಪ್ರತಿಭಟನೆಯಲ್ಲಿ ಮಾತನಾಡಿದ ಆರ್ ಅಶೋಕ್, ಶ್ರೀರಾಮನಿಗೆ ಜೈ ಅಂದವರಿಗೆ ಜೈಲು, ಟಿಪ್ಪುಗೆ ಜೈ ಎಂದವರ ಕೇಸ್ ರದ್ದು, ಇದು ಕಾಂಗ್ರೆಸ್ ನೀತಿಯಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಹಿಂದೂ- ಮುಸ್ಲಿಮರ ನಡುವೆ ಬೆಂಕಿ ಹಚ್ಚುತ್ತಾರೆ. ಅವರು ಯಾರದಾದರೂ ಮನೆಗೆ ಹೋದರೆ ಆ ಮನೆಯಲ್ಲೇ ಎರಡು ಮಾಡಿ ಬರುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸುಮಾರು 69 ಸಾವಿರ ದೀರ್ಘಾವಧಿ ಕೇಸ್ ಗಳು ಬಾಕಿ ಇವೆ ಬೆಂಗಳೂರಿನಲ್ಲಿ ಸುಮಾರು ಹತ್ತು ಸಾವಿರ ಕೇಸ್ ಗಳು ಇವೆ. ಅವೆಲ್ಲವನ್ನು ಬಿಟ್ಟು ಶ್ರೀರಾಮ ಭಕ್ತನ ಬಂಧನದ ಹಿಂದಿನ ಕುತಂತ್ರ ಏನೆಂಬುದು ಜನರಿಗೆ ತಿಳಿದಿದೆ ಎಂದರು.

ಪೊಲೀಸ್ ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಇಂತಹ ಕೆಲಸ ಮಾಡಿದ್ದಾರೆ ಕಾಂಗ್ರೆಸ್ ಪಕ್ಷ ಶಾಶ್ವತವಾಗಿ ಅಧಿಕಾರದಲ್ಲಿರುತ್ತದೆ ಎಂದು ಭಾವಿಸುವುದು ಬೇಡ. ನಾವು ಅಧಿಕಾರಕ್ಕೆ ಬಂದಾಗ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಪೋಲಿಸ್ ಆಧಿಕಾರಿಗಳಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

Advertisement

ನಾನು ಕರ ಸೇವಕ ನನ್ನ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆಯೂ ಕೇಸ್ ಗಳಿವೆ ನಮ್ಮಿಬ್ಬರನ್ನುಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಸಜ್ಜಾಗುತ್ತಿದೆ. ದೀಪಾವಳಿಯ ಸಂಭ್ರಮ ಮನೆ ಮಾಡುತ್ತಿದ್ದು , ಇದನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಹೆದರಿಸುವ ತಂತ್ರಕ್ಕೆ ಮುಂದಾಗಿದೆ. ಇದಕ್ಕೆ ಜಗ್ಗುವ ಮಾತೇ ಇಲ್ಲ ಎಂದರು.

ಒಂದು ನೂರು ಜನ ಸಿದ್ದರಾಮಯ್ಯ ಬಂದರೂ ನಾವು ಹೆದರುವ ಪ್ರಶ್ನೆಯೇ ಇಲ್ಲ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಇದನ್ನು ಮುಂದುವರಿಸುತ್ತೇವೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next