ಮಂಡ್ಯ : ನಿರ್ಬಂಧವಿದ್ದರೂ ಶ್ರೀರಂಗಪಟ್ಟಣದ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೇಲುಕೋಟೆ ಮಂಡಲ ಬಿಜೆಪಿ ಕಾರ್ಯಕರ್ತರು ಮಂಗಳವಾರ `ಸಹಲ್’ ಕಾರ್ಯಕ್ರಮ ಆಯೋಜಿಸಿ ಮಾಂಸದೂಟ ನಡೆಸುವ ಮೂಲಕ ಕಾನೂನು ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಭದ್ರತಾ ದೃಷ್ಟಿಯಿಂದ ಕನ್ನಂಬಾಡಿ ಅಣೆಕಟ್ಟೆಯನ್ನು ಅತೀ ಸೂಕ್ಷ್ಮ ವಲಯ ಪ್ರದೇಶ ಎಂದು ಗುರುತಿಸಲಾಗಿದ್ದು, ಅಣೆಕಟ್ಟೆ ಮೇಲೆ ತೆರಳಲು ಹಾಗೂ ಸುತ್ತಮುತ್ತಲಿನ ಹಿನ್ನೀರು ಪ್ರದೇಶಗಳಲ್ಲಿ ಸಭೆ ಸಮಾರಂಭ ಮಾಡುವುದನ್ನು ನಿಷೇಧಿಸಲಾಗಿದೆ.
ಈಗಿದ್ದರೂ ಬಿಜೆಪಿ ಕಾರ್ಯಕರ್ತರು ಹಿನ್ನೀರು ಪ್ರದೇಶದಲ್ಲಿ ಸಭೆ ನಡೆಸಿ, ಆಟೋಟಗಳೊಂದಿಗೆ ಬಾಡೂಟ ಮಾಡುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಇಲ್ಲಿನ ಭದ್ರತಾ ಅಧಿಕಾರಿಯೊಬ್ಬರು ಖಾಸಗಿ ವ್ಯಕ್ತಿಗೆ ಇಲಾಖಾ ವಾಹನ ನೀಡಿ ಅಣೆಕಟ್ಟೆ ಮೇಲೆ ಸಂಚರಿಸಿದ್ದ ಆರೋಪದಡಿ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತ್ತು ಮಾಡಲಾಗಿತ್ತು. ಅಲ್ಲದೆ, ಮೈಸೂರಿನ ಪೊಲೀಸರ ಕುಟುಂಬಸ್ಥರು ಹಿನ್ನೀರಿನಲ್ಲಿ ಡಿಜೆ ಸೌಂಡ್ ಹಾಕಿಕೊಂಡು ಪಾರ್ಟಿ ನಡೆಸಿದ್ದರು. ಈ ಪ್ರಕರಣಗಳು ಮಾಸುವ ಮುನ್ನವೇ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮ ಆಯೋಜನೆ ಮಾಡಿ, ಆಟೋಟ ಸ್ಪರ್ಧೆ ನಡೆಸಿರುವುದು ಜನಸಾಮಾನ್ಯರಿಗೊಂದು ಕಾನೂನು, ಅಧಿಕಾರಿಗಳಿಗೊಂದು ಕಾನೂನು ಹಾಗೂ ಅಧಿಕಾರದಲ್ಲಿರುವ ಪಕ್ಷದವರಿಗೊಂದು ಕಾನೂನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ: ಈಗಾಗಲೇ ಕೆಆರ್‌ಎಸ್ ಪ್ರದೇಶ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಇಲ್ಲಿಗೆ ಜನಸಾಮಾನ್ಯರು ಹೋಗಲು ನಿರ್ಬಂಧವಿದೆ. ಆದರೆ ಬಿಜೆಪಿ ಕಾರ್ಯಕರ್ತರು ಸರ್ಕಾರ ತಮ್ಮದಿದೆ ಎಂಬ ಉಡಾಫೆಯಿಂದ ಹಿನ್ನೀರು ಪ್ರದೇಶ ಪ್ರವೇಶಿಸಿ ವಾರ್ಷಿಕ ಕ್ರೀಡಾಕೂಟ ನಡೆಸಿ ಕಾನೂನು ಉಲ್ಲಂಘಿಸಿದ್ದಾರೆ. ಕೆಆರ್‌ಎಸ್ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ಪದೇ ಪದೇ ಕಾನೂನು ಉಲ್ಲಂಘನೆ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ವಹಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.