Advertisement

BJP 3ನೇ ಪಟ್ಟಿ ಇಂದು ಘೋಷಣೆ? ಕುತೂಹಲ ಕೆರಳಿಸಿದ ಉತ್ತರ ಕನ್ನಡ ಕ್ಷೇತ್ರ

12:45 AM Mar 16, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿಯ 3ನೇ ಪಟ್ಟಿ ರವಿವಾರ ಬಿಡುಗಡೆಯಾಗುವ ಸಾಧ್ಯತೆ ಇದ್ದು, ರಾಜ್ಯದ 8 ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

Advertisement

ರಾಯಚೂರು, ಚಿತ್ರದುರ್ಗ, ಬೆಳಗಾವಿ, ಚಿಕ್ಕ ಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ ಹಾಗೂ ಉತ್ತರ ಕನ್ನಡ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಬೇಕಿದೆ.

ಈ ಪೈಕಿ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಿದ್ದು, ಹಾಲಿ ಸಂಸದ ಮುನಿಸ್ವಾಮಿ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತುಗಳಿವೆ. ಮಂಡ್ಯ ಹಾಗೂ ಹಾಸನ ಕ್ಷೇತ್ರವನ್ನು ಮೈತ್ರಿ ಪಕ್ಷಕ್ಕೆ ನೀಡಲು ಬಿಜೆಪಿ ನಿರ್ಧರಿಸಿದೆ.

ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್‌ ರೇವಣ್ಣ ಕಣಕ್ಕೆ ಇಳಿಯುವ ಸಾಧ್ಯತೆಗಳು ಇವೆ.

ಬಿಜೆಪಿಯ ಪಾಲಿಗೆ ಬರುವ ಐದು ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ ಹಾಗೂ ಉತ್ತರ ಕನ್ನಡ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಸಚಿವ ಡಾ. ಸುಧಾಕರ್‌ ಹಾಗೂ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರ ಪುತ್ರ ಅಲೋಕ ಹೆಸರು ತೀವ್ರ ಚರ್ಚೆಯಲ್ಲಿದೆ. ಇದೆಲ್ಲದರ ಮಧ್ಯೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರನ್ನು ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಸಬಹುದೆಂದು ಹೇಳಲಾಗುತ್ತಿದೆ. ಆದರೆ ಎರಡೂ ಪಕ್ಷಗಳು ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಅದೇ ರೀತಿ ಉತ್ತರ ಕನ್ನಡದಲ್ಲಿ ಅಭ್ಯರ್ಥಿ ಬದಲಾವಣೆಯಾಗುತ್ತದೆಯೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

Advertisement

ಚಿತ್ರದುರ್ಗ ಕ್ಷೇತ್ರದಿಂದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಕೊನೆಯ ಹಂತದಲ್ಲಿ ಮತ್ತೆ ಸ್ಪರ್ಧೆ ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮಾಜಿ ಸಂಸದ ಜನಾರ್ದನಸ್ವಾಮಿ ಕೂಡ ಆಕಾಂಕ್ಷಿಯಾಗಿದ್ದಾರೆ. ಬೆಳಗಾವಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಣಕ್ಕೆ ಇಳಿಯುವುದು ಖಚಿತವಾಗಿದೆ. ರಾಯಚೂರಿನಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.

ರಾಜ್ಯದ ಎರಡನೇ ಪಟ್ಟಿಯನ್ನು ಶನಿವಾರ ಪ್ರಕಟಿಸಬಹುದೆಂದು ಹೇಳಲಾಗುತ್ತಿತ್ತು. ಆದರೆ ಕೇಂದ್ರ ಚುನಾವಣ ಆಯೋಗದ ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ರವಿವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು ಯಾರು?
ಚಿಕ್ಕಬಳ್ಳಾಪುರ- ಡಾ| ಸುಧಾಕರ್‌/ಅಲೋಕ್‌ ವಿಶ್ವನಾಥ್‌/ಸುಮಲತಾ ಅಂಬರೀಷ್‌
ಚಿತ್ರದುರ್ಗ - ಎ. ನಾರಾಯಣ ಸ್ವಾಮಿ/ ಜನಾರ್ದನಸ್ವಾಮಿ
ಬೆಳಗಾವಿ- ಜಗದೀಶ್‌ ಶೆಟ್ಟರ್‌
ರಾಯಚೂರು- ರಾಜಾ ಅಮರೇಶ್ವರ ನಾಯಕ
ಉತ್ತರ ಕನ್ನಡ- ಅಭ್ಯರ್ಥಿಯ ಬಗ್ಗೆ ಕುತೂಹಲ

Advertisement

Udayavani is now on Telegram. Click here to join our channel and stay updated with the latest news.

Next