Advertisement

ಅಂತ್ಯೋದಯ, ಸರ್ವೋದಯ, ರಾಮರಾಜ್ಯ ಸಾಕಾರ ಗುರಿ: ಸಂತೋಷ್‌

10:51 PM Nov 13, 2021 | Team Udayavani |

ಮಂಗಳೂರು: ದೀನ್‌ ದಯಾಳ್‌ ಉಪಾಧ್ಯಾಯರ ಅಂತ್ಯೋ ದಯ, ಆಚಾರ್ಯ ವಿನೋಬಾ ಭಾವೆ ಅವರ ಸರ್ವೋದಯ ಹಾಗೂ ಮಹಾತ್ಮಾ ಗಾಂಧಿ ಅವರ ರಾಮ ರಾಜ್ಯವನ್ನು ಸಾಕಾರ ಮಾಡುವುದು ಬಿಜೆಪಿಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು.

Advertisement

ನಗರದ ಟಿ.ವಿ. ರಮಣ್‌ ಪೈ ಹಾಲ್‌ನಲ್ಲಿ ಶನಿವಾರ ನಡೆದ ಬಿಜೆಪಿ  ಕರ್ನಾಟಕ ಪ್ರಕೋಷ್ಠಗಳ 2 ದಿನಗಳ ಚಿಂತನ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕ್ಷೇತ್ರ ಗಳಲ್ಲಿ ಬಿಜೆಪಿಗೆ ಸೋಲಾಗುತ್ತಿದೆ. ಇನ್ನು ಕೆಲವೆಡೆ ಇಡೀ ಜಿಲ್ಲೆಯಲ್ಲಿ ಗೆದ್ದರೂ ನಡುವೆ ಒಂದೊಂದು ಕ್ಷೇತ್ರ ಗಳಲ್ಲಿ ಗೆಲ್ಲುವುದು ಕಷ್ಟವಾಗಿದೆ. ಎಲ್ಲ ಕಡೆಗಳಲ್ಲೂ ಬಿಜೆಪಿಯು ರಾಜಕೀಯ ಪ್ರಾಬಲ್ಯ ಸ್ಥಾಪಿಸಬೇಕಿದೆ. ಇಡೀ ಕರಾವಳಿಯಲ್ಲಿ ಬಿಜೆಪಿ ಗೆದ್ದರೂ ಉಳ್ಳಾಲದಲ್ಲಿ ಆಗಿಲ್ಲ. ಇಂತಹ ಕ್ಷೇತ್ರಗಳಲ್ಲೂ ಗೆಲುವು ಸಾಧ್ಯವಾಗ ಬೇಕಾದರೆ ಸಂಘಟನೆಯ ಶಕ್ತಿಯನ್ನು ಕಡೇ ಬೂತ್‌ವರೆಗೂ ಕೊಂಡೊಯ್ಯಬೇಕೆಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಚಿವರಾದ ಎಸ್‌.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಭಾನು ಪ್ರಕಾಶ್‌, ಸಹ ಸಂಯೋಜಕ ಡಾ| ಶಿವಯೋಗಿಸ್ವಾಮಿ ಉಪಸ್ಥಿತರಿದ್ದರು.

ವೃತ್ತಿಪರ ಪ್ರಕೋಷ್ಠ ಸಂಚಾಲಕ ಚೆನ್ನಮಲ್ಲಿಕಾರ್ಜುನ ಸ್ವಾಗತಿಸಿ, ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಕುಮಾರ್‌ ವಂದಿಸಿದರು.

Advertisement

ಸಿದ್ದುಗೆ ಅರ್ಥ ಆಗುವುದಿಲ್ಲ:

ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಯಾರಾದರೂ ಬಲಿದಾನ ಮಾಡಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ಆಗ ನಾವ್ಯಾರೂ ಹುಟ್ಟಿರಲಿಲ್ಲ, ಹಾಗಾಗಿ ಬಲಿದಾನ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಬಲಿದಾನ ಅವಕಾಶ ಬಂದಾಗ ನಮ್ಮ ಸಂಘಟನೆಯವರು ಮಾಡಿದಷ್ಟು ಬಲಿದಾನ ಬೇರೆ ಯಾರೂ ಮಾಡಿಲ್ಲ. ಈಗ ಮಹಾತ್ಮಾ ಗಾಂಧೀ ಹೆಸರಿನಲ್ಲಿ ಎಲ್ಲ ಕಡೆ ಕಾಂಗ್ರೆಸ್‌ನವರು ಅಂಗಡಿ ತೆರೆದಿದ್ದಾರೆ. ಆದರೆ ಅವರ ವಿಷಯದಲ್ಲಿ ಅತಿ ಹೆಚ್ಚು ಪಾಪ ಮಾಡಿದವರು ಕಾಂಗ್ರೆಸಿಗರೇ. ಸಿದ್ದರಾಮಯ್ಯನವರಿಗೆ ಇದು ಅರ್ಥ ಆಗುವುದಿಲ್ಲ. 30-40 ವರ್ಷ ರಾಜಕೀಯ ಅನುಭವ ಇರುವವರು ಏಕವಚನ ಬಳಸುತ್ತಾರೆ ಎಂದು ಸಂತೋಷ್‌ ಟೀಕಿಸಿದರು.

ರಾಹುಲ್‌ ಪಾರ್ಟ್‌ ಟೈಮ್‌ ರಾಜಕಾರಣಿ:

ರಾಹುಲ್‌ ಗಾಂಧಿ ಪಾರ್ಟ್‌ ಟೈಮ್‌ ರಾಜಕಾರಣಿ. ಅವರಿಗೆ ಯಾವುದೇ ಬದ್ಧತೆ, ಪ್ರಾಮಾಣಿಕತೆ ಇಲ್ಲ. ಎಲ್ಲಿಯೊ ಕುಳಿತು ಪ್ರತಿಸಲ ಟ್ವೀಟ್‌ ಮಾಡುತ್ತಾರೆ ಎಂದು ಸಂತೋಷ್‌ ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ದಿಲ್ಲಿಗೆ ಬುಲಾವ್‌ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್‌, ಶೆಟ್ಟರ್‌ ಪಕ್ಷದ ವಿಚಾರ ದಲ್ಲಿ ಹೋಗಿಲ್ಲ. ಸ್ವಂತ ಕೆಲಸಕ್ಕೆ ಹೋಗಿರಬಹುದು ಎಂದರು.

 

ಕಾಂಗ್ರೆಸ್‌ ಮುಕ್ತ ಎಂದರೆ …

ಕಾಂಗ್ರೆಸ್‌ ಮುಕ್ತ ಎಂದು ಪ್ರಧಾನಿ ಮೋದಿ ಹೇಳಿರುವುದರ ಅರ್ಥ ಪಕ್ಷ ಮುಕ್ತ ಎಂದಲ್ಲ. ವ್ಯವಸ್ಥೆಯೊಳಗೆ ವಿಪಕ್ಷ ಬೇಕು, ಆದರೆ ಕಾಂಗ್ರೆಸ್‌ನಂತಹ ಪಕ್ಷ ಅಲ್ಲ. ಹಾಗಾಗಿ ಕಾಂಗ್ರೆಸ್‌ ಮುಕ್ತ ಎಂದರೆ ಕಾಂಗ್ರೆಸ್‌ ಚಿಂತನೆಗಳಿಂದ ಮುಕ್ತ ಎಂದು ಸಂತೋಷ್‌ ವ್ಯಾಖ್ಯಾನಿಸಿದರು.

23,000 ಬ್ಯಾಟರಿ  ಬಂಕ್‌ಗಳು :

ಬಿಜೆಪಿ ಆಡಳಿತದಲ್ಲಿ ದೇಶ ಹಿಂದಕ್ಕೆ ಹೋಗುತ್ತದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ; ದೇಶ ಹಿಂದಕ್ಕೆ ಹೋಗುವುದಿಲ್ಲ. ದೇಶವನ್ನು ಹಿಂದಕ್ಕೆ ಎಳೆಯುವ ಪಕ್ಷಕ್ಕೆ ಯಶಸ್ಸು ಸಿಗಲಾರದು. ಪ್ರಧಾನಿ ಮೋದಿ ನೇತೃತ್ವದಲ್ಲಿ  ಭಾರತ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ದೇಶದ 23,000 ಪೆಟ್ರೋಲ್‌ ಬಂಕ್‌ಗಳು ಬ್ಯಾಟರಿ ಬಂಕ್‌ಗಳಾಗಿ ಪರಿವರ್ತನೆ ಹೊಂದಲಿವೆ ಎಂದು ಸಂತೋಷ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next