ನವದೆಹಲಿ: ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದು, ಅದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿ ನಮ್ಮ ಸಂಬಂಧವನ್ನು ಬಲವಂತವಾಗಿ ಮುರಿದು ಬೀಳುವಂತೆ ಮಾಡಿದ್ದು, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದೇನೆ…ಇದು ಸೋಮವಾರ ಅಸ್ಸಾಂನ ಗೋಲಾಪುರಲ್ಲಿ ಸಿಕ್ಕಿಬಿದ್ದಿರುವ ಮೂವರು ಶಂಕಿತ ಉಗ್ರರ ಪೈಕಿ ಒಬ್ಬಾತ ಪೊಲೀಸರಿಗೆ ತನಿಖೆ ವೇಳೆ ತಿಳಿಸಿರುವುದಾಗಿ ವರದಿಯಾಗಿದೆ.
ಐಸಿಸ್ ನಿಂದ ಪ್ರೇರಿತಗೊಂಡ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಮಾಹಿತಿ ಪಡೆದಿದ್ದ ಅಸ್ಸಾಂ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಗ್ರೆನೇಡ್ ಸಹಿತ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದರು. 24 ವರ್ಷದ ಲೂಯಿಟ್ ಝಮೀಲ್ ಝಮಾನ್ ಪ್ರೇಮ ವೈಫಲ್ಯದಿಂದ ಸೇಡು ತೀರಿಸಿಕೊಳ್ಳಲು ಸಂಘಟನೆ ಸೇರಿರುವುದಾಗಿ ತಿಳಿಸಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಸ್ಸಾಂನ ಆಧಾರ್ ಸೆಂಟರ್ ನಲ್ಲಿ ಲೂಯಿಟ್ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈ ಸಂದರ್ಭದಲ್ಲಿ ಹಿಂದೂ ಯುವತಿಯೊಬ್ಬಳನ್ನು ನೋಡಿ ಆಕೆಯ ಪ್ರೀತಿಯಲ್ಲಿ ಬಿದ್ದಿದ್ದ. ತನ್ನ ಗೆಳೆಯನ ಮೂಲಕ ಆಕೆ ಬಳಿ ಪ್ರೇಮಿಸುತ್ತಿರುವ ವಿಷಯ ಮುಟ್ಟಿಸಿದ್ದ. ಅದರಂತೆ ಆಕೆಯೂ ಪ್ರೇಮಿಗಳ ದಿನಾಚರಣೆಯಂದು ತನ್ನ ಒಪ್ಪಿಗೆ ಸೂಚಿಸಿದ್ದಳು. ಬಳಿಕ ಇಬ್ಬರು ಗೆಳೆಯರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಇವರಿಬ್ಬರ ಪ್ರೇಮ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯುವತಿಯ ಸಮುದಾಯದವರು ಸಭೆ ನಡೆಸಿ ಯುವಕನನ್ನು ಶಿಕ್ಷೆಗೊಳಪಡಿಸುವ ನಿರ್ಧಾರ ಕೈಗೊಂಡಿರುವುದಾಗಿ ಆರೋಪಿಸಿದ್ದ. ಅಲ್ಲದೇ ಯುವತಿ ಜತೆ ಕಾಣಿಸಿಕೊಳ್ಳಬಾರದು ಎಂದು ಬೆದರಿಕೆ ಹಾಕಿರುವುದಾಗಿ ವಿಚಾರಣೆ ವೇಳೆ ಲೂಯಿಟ್ ಹೇಳಿದ್ದಾನೆ.
ಪ್ರೇಮ ವೈಫಲ್ಯ, ಸೇಡು ತೀರಿಸಿಕೊಳ್ಳುವಂತಹ ಮನಸ್ಥಿತಿಯುಳ್ಳವರ ವಾಟ್ಸಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಗೆ ಲೂಯಿಟ್ ಸೇರ್ಪಡೆಗೊಂಡ ನಂತರ ಈತ ಶಂಕಿತ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವಾಟ್ಸಪ್ ಮೂಲಕವೇ ಐಇಡಿ ಸ್ಫೋಟಕ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಲಲಿತ್ ಮೋಹನ್ ನೇಗಿ ತಿಳಿಸಿದ್ದಾರೆ.