Advertisement

ಆಷಾಢದ ಕಹಿ ಪಂಚಮಿಯ ಸಿಹಿ!

08:58 PM Aug 01, 2019 | mahesh |

ಮಳೆಗಾಲ ಪ್ರಾರಂಭವಾಗುತ್ತಿರುವಂತೆಯೇ ಆಷಾಢ ಮಾಸ ಬಂದೇ ಬಿಟ್ಟಿತು. “ಆಷಾಢ’ ಎನ್ನುವ ಪದ ಕಿವಿಗೆ ಬಿದ್ದಾಗಲೆ ಹಿರಿ ಜೀವಗಳಲ್ಲಿ ಏನೋ ತಳಮಳ, ಕಳೆದು ಹೋದ ಕಾಲದ ಅವಿಸ್ಮರಣೀಯ ಅನುಭವಗಳ ಪುಟಗಳೇ ಮನದಲ್ಲಿ ತೆರೆದುಕೊಳ್ಳುತ್ತವೆ. ಅಂದಿನ ಹುಲ್ಲಿನ ಮಾಡಿನ ಮನೆಯಲ್ಲಿ ಹೊರಗಡೆ ಸುರಿಯುತ್ತಿರುವ ಜಟಪಟಿ ಮಳೆಯಿಂದಾಗಿ ಹೊರಬರಲಾಗದೆ ಹುಲ್ಲಿನ ಮನೆಯ ಬೆಚ್ಚಗಿನ ವಾತಾವರಣದಲ್ಲಿ ಮುದುಡಿಕೊಳ್ಳುತ್ತಿದ್ದ ನನ್ನ ಅಜ್ಜಿ , ತಾತನ ಸವಿನೆನಪುಗಳನ್ನು ಕೇಳಲು ಏನೋ ಖುಷಿ. ಅದನ್ನೆಲ್ಲ ನಿಮ್ಮಲ್ಲಿ ಹಂಚಿಕೊಂಡು ಸಂಭ್ರಮಿಸಲು ಈ ನನ್ನ ಬರವಣಿಗೆ.

Advertisement

ಅಂದಿನ ಬಡ ಕುಟುಂಬಗಳು ಕೃಷಿಯನ್ನೇ ಅವಂಲಬಿಸಿಕೊಂಡು ಬದುಕುತ್ತಿದ್ದವು. ಇದ್ದ ಹಣವನ್ನೆಲ್ಲ ಒಟ್ಟುಗೂಡಿಸಿ ಹೊಲದಲ್ಲಿ ಬಿತ್ತನೆ ಮಾಡಿದ ಬಳಿಕ ಬರುವ ತಿಂಗಳೇ “ಆಷಾಢ’. ಕೈಯಲ್ಲಿ ಹಣವಿಲ್ಲದೆ, ಕೂಡುಕುಟುಂಬಗಳು ಹಲಸಿನ ಹಣ್ಣಿನ ಸವಿರುಚಿಯಲ್ಲೇ ದಿನದೂಡಿ ಬದುಕಬೇಕಾದ ಕಷ್ಟದ ದಿನಗಳವು. ಇಂದಿನ ಹಾಗೆ ಕೋರ್ಟು-ಕಚೇರಿ ಅಂದಿರಲಿಲ್ಲ. ವಿಜ್ಞಾನದ ಬೆಳವಣಿಗೆ ಇರಲಿಲ್ಲ. ಅವಿಭಾಜ್ಯ ಕುಟುಂಬವು ಪೂರ್ತಿಯಾಗಿ ಕೃಷಿಯನ್ನೇ ಅವಲಂಬಿಸಿದ್ದರಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಆಷಾಢ ಮಾಸದಲ್ಲಿತ್ತು. ಆಷಾಢ ಮಾಸದಲ್ಲಿ ಕೆಸುವಿನ ಪಲ್ಯ, ಚಗತೆ ಸೊಪ್ಪು ಮತ್ತು ಹಲಸಿನ ಬೀಜದ ಪಲ್ಯವೇ ಆಷಾಢದ ಸ್ವಾದಿಷ್ಟ ಹಾಗೂ ಆರೋಗ್ಯಯುತ ತಿನಿಸುಗಳಾಗಿದ್ದವು. ಆಷಾಢದ ಅಮಾವಾಸ್ಯೆಯಂದು ತಯಾರಿಸುವ ಹಾಳೆ ಮರದ ಕಷಾಯದ ಕಹಿ ಹಾಗೂ ಮೆಂತೆ ಗಂಜಿಯ ಸಿಹಿ ಒಂದಕ್ಕೊಂದು ಪೂರಕವಾಗಿ ಸಂಯೋಜಿಸಿದಂತಿರುತ್ತದೆ. ಅಂದಿನ ಕುಟುಂಬಗಳಲ್ಲಿನ ಸದಸ್ಯರಿಗೆ ಆಷಾಢದಲ್ಲಿ ಉಪ್ಪಿನ ಸೊಳೆಯನ್ನು ವಿಂಗಡಿಸಿ ಉಪ್ಪಿಗೆ ಹಾಕುವುದೇ ಅವರ ಆಷಾಢದ ಕಸುಬಾಗಿತ್ತು.

ಆಷಾಢದ ದಿನಗಳು ಕೊನೆಗೊಳ್ಳುತ್ತಿದ್ದಂತೆಯೇ ಹಬ್ಬಗಳ ಸಾಲೇ ಪ್ರಾರಂಭಗೊಳ್ಳುತ್ತದೆ. ಆಷಾಢದ ಕಷ್ಟದ ದಿನಗಳಿಗೆ ನಾಗರ ಪಂಚಮಿಯ ಸಿಹಿ ಒಂದಷ್ಟು ಮನಸ್ಸಿಗೆ ಮುದ ನೀಡುತ್ತದೆ. ನಾಗರ ಪಂಚಮಿಯಂದು ತನು ಎರೆಯುವ ಸಡಗರವನ್ನು ಅಜ್ಜಿ-ತಾತನ ಬಾಯಲ್ಲಿ ಕೇಳುವುದೇ ಒಂದು ಸಂಭ್ರಮ. ಆದರೆ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ನಾಗಬನಗಳೆಲ್ಲ ಮಾಯವಾಗಿ ಕಾಂಕ್ರೀಟ್‌ ಬನಗಳಷ್ಟೇ ತುಂಬಿಕೊಂಡಿವೆ. ಆದರೂ ಖುಷಿಯೇನೆಂದರೆ ತನು ಎರೆಯುವ ಸಂಪ್ರದಾಯ ಇನ್ನೂ ಮುಂದುವರಿದಿರುವುದು. ಪಂಚಮಿಯಂದು ತಯಾರಿಸುವ ಅರಸಿನ ಎಲೆಯಿಂದ ಮಾಡಿದ ಖಾದ್ಯದ ಸಿಹಿ ಸವಿದವರಿಗಷ್ಟೇ ಗೊತ್ತು ಅದರ ರುಚಿ!

ಅಜ್ಜಿ-ತಾತನ ಆ ಕಾಲದ ಆ ಮಳೆ ಇಂದೆಲ್ಲಿ ಕಾಣಸಿಗುತ್ತದೆ? ಅಂಗಡಿಗಳಲ್ಲಿ ಸಿಗುವ ಮಸಾಲೆಭರಿತ ಕುರ್‌ಕುರೆ ತಿಂಡಿಗಳೆದುರು ಹಲಸಿನ ಹಣ್ಣು ಯಾರಿಗೆ ಬೇಕು? ನಾಗಬನಗಳ ಹೆಸರಿನಲ್ಲಾದರೂ ಒಂದಷ್ಟು ಕಾಡುಗಳು ಅಂದು ಉಳಿದುಕೊಂಡಿದ್ದವು. ಇಂದು ಎಲ್ಲವೂ ಕಣ್ಮರೆಯಾಗಿದೆ. ಆಷಾಢದ ಸೊಗಸು ಉಳಿಯಬೇಕೆಂದರೆ ಹಿಂದಿನ ಮಳೆಯ ಸೊಬಗು ಮರುಕಳಿಸಬೇಕು. ಮಳೆಗಾಲ ಇಂದು ನಮ್ಮೆಲ್ಲರ ಚಿತ್ತ ಆಕಾಶದತ್ತ ನೆಟ್ಟಿದೆ. ಆಷಾಢದ ವರ್ಷಧಾರೆ ಕಣ್ಮರೆಯಾಗಿ ಎಲ್ಲೆಡೆ ಶೂನ್ಯವೇ ಭಾಸವಾಗುತ್ತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಹಬ್ಬ-ಹರಿದಿನಗಳ ಸಂಭ್ರಮ ಚಿಗುರೊಡೆಯಬೇಕೆಂದರೆ, ಆಷಾಢದ ಮಳೆ ಮತ್ತೆ ಧರೆಗಪ್ಪಳಿಸಬೇಕೆಂದರೆ ಪ್ರಕೃತಿಯೊಡನೆ ನಮ್ಮ ಒಡನಾಟ ಮತ್ತೆ ಮುಂದುವರಿಯಬೇಕು.

ನಮ್ಮ ಇಂದಿನ ಜನಾಂಗವು ಬಾಯಿಮಾತಿನಿಂದ ಮಾತ್ರ ಪ್ರಕೃತಿಯನ್ನು ಉಳಿಸಿ-ಬೆಳೆಸಿ ಎಂದು ಭಾಷಣ ಬಿಗಿಯುತ್ತಾರೆ. ಕಾರ್ಯರೂಪಕ್ಕೆ ತರಲು ನಮ್ಮ ಯುವಜನಾಂಗವು ಕಟಿಬದ್ಧರಾಗಬೇಕು. ಪ್ರಕೃತಿಯನ್ನು ಉಳಿಸಲು ಹೋರಾಡಬೇಕು. ಆಗ ಮಾತ್ರ ಆಷಾಢದ ಧಾರಾಕಾರವಾಗಿ “ಧೋ’ ಎಂದು ಸುರಿಯುವ ಮಳೆ ಮತ್ತೆ ಮರುಕಳಿಸಲು ಸಾಧ್ಯ.

Advertisement

ಅಜ್ಜಿ-ತಾತನ ಅನುಭವದ ಸಾರವೇ ಈ ನನ್ನ ಬರವಣಿಗೆಗೆ ಪ್ರೇರಣೆ. ಕೃಷಿ ಚಟುವಟಿಕೆಗಳು ಮತ್ತೆ ಹಸನಾಗಲಿ. ಎಲ್ಲೆಡೆ ಹಸಿರು ನಳನಳಿಸುವಂತಾಗಲಿ ಎನ್ನುವ ಹಿರಿ ಜೀವಗಳ ಕನಸು ನನಸಾಗಲಿ. ಇದಕ್ಕಾಗಿ ನಾವೆಲ್ಲರೂ ಪ್ರಕೃತಿಯೊಡನೆ ಕೈಜೋಡಿಸಿ, ಮರ-ಗಿಡಗಳನ್ನು ಉಳಿಸಬೇಕು.

ಶ್ರಾವ್ಯಾ ದೇವಾಡಿಗ
10ನೆಯ ತರಗತಿ,
ಸಂತ ಲಾರೆನ್ಸ್‌ ಆಂಗ್ಲ ಮಾಧ್ಯಮ ಶಾಲೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next