Advertisement

ಬಿಟ್‌ ಕಾಯಿನ್‌ ಪ್ರಕರಣ: ಸಿಎಂ ಬೆನ್ನಿಗೆ ಸಚಿವರು

12:52 AM Nov 16, 2021 | Team Udayavani |

ಬೆಂಗಳೂರು: ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಸಚಿವರು ಮುಖ್ಯಮಂತ್ರಿ ಬೆನ್ನಿಗೆ ನಿಲ್ಲುತ್ತಿಲ್ಲ ಎಂಬ ಮಾತುಗಳ ಬೆನ್ನಲ್ಲೇ ಸಚಿವರ ದಂಡು ಬಸವರಾಜ ಬೊಮ್ಮಾಯಿ ಪರ ನಿಂತಿದೆ. ಸಚಿವರಾದ ಆರ್‌. ಅಶೋಕ್‌, ವಿ. ಸೋಮಣ್ಣ, ಗೋಪಾಲಯ್ಯ, ಈಶ್ವರಪ್ಪ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Advertisement

ವಾಕ್ಸಮರ ಮುಂದುವರಿಕೆಯ ಜತೆ ಪ್ರಕರಣದಲ್ಲಿ ಈಗ ಯಾರ ಕಾಲದಲ್ಲಿ ಎಷ್ಟು ತಪ್ಪು ಆಗಿದೆ, ಯಾರ ವೈಫ‌ಲ್ಯ ಎಷ್ಟೆಷ್ಟು ಎಂಬ ಆರೋಪ-ಪ್ರತ್ಯಾರೋಪಗಳೂ ಆರಂಭಗೊಂಡಂತಾಗಿದೆ.

ವಿಧಾನಸೌಧಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಸಿಎಂ ಬೊಮ್ಮಾಯಿ ಪರ ಬ್ಯಾಟಿಂಗ್‌ ನಡೆಸಿದರು. ಕಾಂಗ್ರೆಸ್‌ನದ್ದು “ಹಿಟ್‌ ಆ್ಯಂಡ್‌ ರನ್‌’ ಸಂಸ್ಕೃತಿ. ಬಿಟ್‌ ಕಾಯಿನ್‌ ವಿಚಾರದಲ್ಲಿ ಆರೋಪಗಳಿಗೆ ದಾಖಲೆ ಕೊಟ್ಟು ಮಾತನಾಡಲಿ. ಹಾವು ಬಿಡು ತ್ತೇವೆ ಎಂದು ಖಾಲಿ ಬುಟ್ಟಿ ಇಟ್ಟುಕೊಂಡು ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಟೀಕಿಸಿದರು. ಬೊಮ್ಮಾಯಿ ಅವರ ಸಾಧನೆ ಸಹಿಸದೆ ಸರಕಾರ ಅಸ್ಥಿರಗೊಳಿಸಲು ಷಡ್ಯಂತ್ರ ರೂಪಿಸಲಾಗಿದೆ. ಇಬ್ಬರು ಪ್ರಭಾವಿಗಳಿದ್ದಾರೆ ಎಂದು ಹೇಳುವ ಕಾಂಗ್ರೆಸ್‌ ನಾಯಕರು ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಖಾಲಿ ಬುಟ್ಟಿ
ಬಿಟ್‌ ಕಾಯಿನ್‌ ಪ್ರಕರಣ ತನಿಖೆಯಲ್ಲಿ ನಮ್ಮ ಸರಕಾರದ ವೈಫಲ್ಯ ಇಲ್ಲ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳುವುದು ಕಾಂಗ್ರೆಸ್‌ ಸಂಸ್ಕೃತಿ. ಮುಂದಿನ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸೃಷ್ಟಿ ಮಾಡಿರುವ ವಿಚಾರವೇ ಬಿಟ್‌ ಕಾಯಿನ್‌. ನಿತ್ಯ ಏನು ಸುಳ್ಳು ಹೇಳಬೇಕು ಎಂಬುದು ಕಾಂಗ್ರೆಸ್‌ ಚಿಂತೆ. ಹಾವು ಬಿಡುತ್ತೇವೆ ಎಂದು ಖಾಲಿ ಬುಟ್ಟಿ ಇರಿಸಿಕೊಂಡು ಸದ್ದು ಮಾಡುತ್ತಿದ್ದಾರೆ. ಇವರ ಹಣೆಬರಹವೇ ಇಷ್ಟು ಎಂದು ಟೀಕಿಸಿದರು.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸುಜೇìವಾಲಾ ಬಿಟ್‌ ಕಾಯಿನ್‌ ಹಗರಣ 4,500 ಕೋಟಿ ರೂ.ಗಳದ್ದು ಎಂದು ಹೇಳುತ್ತಾರೆ. ಆದರೆ ಅವರ ಟ್ವೀಟ್‌ನಲ್ಲಿ ಪ್ರಸ್ತಾವಿಸಿರುವ ವೇಲ್‌ ಅಲರ್ಟ್‌ ಎಂಬ ತನಿಖಾ ಸಂಸ್ಥೆಯೇ ಇಲ್ಲ. 4,500 ಕೋಟಿ ರೂ. ಹ್ಯಾಕ್‌ ಮಾಡಿದ ಪ್ರಕರಣದಲ್ಲಿ ಇಸ್ರೇಲ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಉಸ್ತುವಾರಿ ಮಾಹಿತಿ ಇಲ್ಲದೆ ಮಾತನಾಡುತ್ತಾರೆ ಎಂಬುದರಿಂದ ಅವರ ಪ್ರಬುದ್ಧತೆ ಎಷ್ಟು ಎಂಬುದು ಗೊತ್ತಾಗುತ್ತದೆ. 2016ರಿಂದಲೇ ಬಿಟ್‌ ಕಾಯಿನ್‌ ವ್ಯವಹಾರ ನಡೆದಿದೆ. ಆಗಿನ ಕಾಂಗ್ರೆಸ್‌ ಸರಕಾರದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಯುಬಿ ಸಿಟಿ ಹೊಟೇಲ್‌ನಲ್ಲಿ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸದೆ ಬಿಟ್ಟು ಕಳುಹಿಸಿದರು. ಆಗ ಯಾವ ಒತ್ತಡ ಇತ್ತು, ಯಾರ ಒತ್ತಡ ಇತ್ತು ಎಂಬುದನ್ನು ಹೇಳಲಿ ಎಂದು ಪ್ರಶ್ನಿಸಿದರು.

Advertisement

ಪೊಲೀಸ್‌ ವಶದಲ್ಲಿದ್ದಾಗ ಶ್ರೀಕಿಗೆ ಡ್ರಗ್ಸ್‌ ನೀಡ ಲಾಗಿತ್ತು ಎಂಬುದು ಮತ್ತೂಂದು ಸುಳ್ಳು. ನ್ಯಾಯಾ ಲಯದ ಆದೇಶದ ಮೇರೆಗೆ ತಪಾಸಣೆ ನಡೆಸಿ ಡ್ರಗ್ಸ್‌ ಸೇವನೆ ಆಗಿರಲಿಲ್ಲ ಎಂದು ವರದಿ ಬಂದಿದೆ. ಕಾಂಗ್ರೆಸ್‌ನ ಸುಳ್ಳು ಸೃಷ್ಟಿಗೆ ಇದಕ್ಕಿಂತ ಉದಾಹರಣೆ ಬೇಕೇ ಎಂದು ಅಶೋಕ್‌ ಪ್ರಶ್ನಿಸಿದರು.

ಇದನ್ನೂ ಓದಿ:ನಮ್ಮ ಕುಟುಂಬದ ತಂಟೆಗೆ ಬಂದರೆ ಹುಷಾರ್‌: ಬಿಜೆಪಿಗೆ ಎಚ್‌ಡಿಕೆ ಎಚ್ಚರಿಕೆ

ಸಹಿಸಲಾಗುತ್ತಿಲ್ಲ
ಇದು ಕುತಂತ್ರ. ಇಲ್ಲಿ ರಾಜ್ಯ ಸರಕಾರ ಹಾಗೂ ಬಸವರಾಜ ಬೊಮ್ಮಾಯಿ ಅವರ ಸಣ್ಣ ಪಾತ್ರವೂ ಇಲ್ಲ. ಕಾಂಗ್ರೆಸ್‌ನವರಿಗೆ ಪ್ರಚಾರದ ಹುಚ್ಚು. ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ನಿಯಂತ್ರಣಕ್ಕೆ ಬಂದದ್ದೇ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ. 100 ದಿನದಲ್ಲಿ ದೇಶ ಮೆಚ್ಚುವ ಆಡಳಿತ ನೀಡಿದ್ದರಿಂದ ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ ಎಂದು ಸಚಿವ ವಿ. ಸೋಮಣ್ಣ ದೂರಿದರು.

ಶ್ರೀಕಿಯನ್ನು ಬಂಧಿಸಿದ್ದು ಬಿಜೆಪಿ ಸರಕಾರ. ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲೇ ಸಾಗಿದೆ. ಎಲ್ಲವೂ ಪಾರದರ್ಶಕವಾಗಿಯೇ ಇದೆ. ನ್ಯಾಯಾಲಯಕ್ಕೂ ಕಾಲ ಕಾಲಕ್ಕೆ ಮಾಹಿತಿ ನೀಡಲಾಗಿದೆ. ಇ.ಡಿ. ಮತ್ತು ಸಿಬಿಐಗೂ ಪತ್ರ ಬರೆಯಲಾಗಿದೆ. ಇಷ್ಟಾದರೂ ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು ಸಚಿವ ಗೋಪಾಲಯ್ಯ ಆರೋಪಿಸಿದರು.

ಹೆಸರು ಹೇಳಿ
ಕಾಂಗ್ರೆಸ್‌ನವರು ಹೆಸರು ಹೇಳಲಿ. ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ, ಖಾಲಿ ಡಬ್ಬದಿಂದ ಸದ್ದು ಮಾಡುತ್ತಿದ್ದಾರೆ ಎಂದು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್‌. ಈಶ್ವರಪ್ಪ ಕುಟುಕಿದರು.

ಶ್ರೀಕಿಗೆ ಭದ್ರತೆ ಕೊಡಿ: ಸಿದ್ದರಾಮಯ್ಯ
ಹಗರಣದ ಸೂತ್ರಧಾರ ಎನ್ನಲಾದ ಶ್ರೀಕಿಗೆ ಭದ್ರತೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣ ಸ್ಫೋಟಗೊಂಡ ಅನಂತರ ನಾಟಕೀಯ ರೀತಿಯಲ್ಲಿ ಶ್ರೀಕಿ ಬಂಧನ ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಸಂಶಯಗಳಿಗೆ ಕಾರಣವಾಗಿದೆ. ಆತನ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದರು. ಕಾಂಗ್ರೆಸ್‌ ಅವಧಿಯಲ್ಲಿ ಹಗರಣ ನಡೆದಿತ್ತು ಎಂಬ ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ, ನಮ್ಮ ಅವಧಿಯಲ್ಲಿ ಬಿಟ್‌ ಕಾಯಿನ್‌ ಹಗರಣ ನಡೆದಿರಲಿಲ್ಲ. ಹಲ್ಲೆ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಪ್ರಶ್ನೆ ಇರುವುದು ಆತ ಪೊಲೀಸ್‌ ವಶದಲ್ಲಿದ್ದಾಗ ಏನೇನು ನಡೆಯಿತು, ಎಷ್ಟು ಹ್ಯಾಕ್‌ ಆಯಿತು, ಹಣ ಯಾರಿಗೆ ವರ್ಗಾವಣೆ ಆಯಿತು ಎಂಬುದು. ಇದರ ಬಗ್ಗೆ ತನಿಖೆಯಾಗಬೇಕು ಎಂದರು.

ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಹಣ ಕಳೆದುಕೊಂಡ ಕಂಪೆನಿ ಯಾವುದು, ಎಷ್ಟು ಹಣ ಕಳೆದುಕೊಂಡಿದೆ, ಯಾರ ಅಕೌಂಟ್‌ಗೆ ಹೋಗಿದೆ, ದೂರು ಕೊಟ್ಟಿರು ವವರು ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್‌ ಉತ್ತರ ನೀಡಲಿ.
– ಆರ್‌. ಅಶೋಕ್‌, ಕಂದಾಯ ಸಚಿವ

ಕಾಂಗ್ರೆಸ್‌ ದಾಖಲೆಗಳೊಂದಿಗೆ ಸ್ಪಷ್ಟವಾದ ಹೋರಾಟ ಮಾಡಬೇಕು. ಜನಧನ್‌ ಖಾತೆ  ಹಣ ಹ್ಯಾಕ್‌ ಕುರಿತು ಮಾತನಾಡಿದ್ದಕ್ಕೆ ಇ.ಡಿ. ನೋಟಿಸ್‌ ನೀಡಿ ತನಿಖೆಗೆ ಸಹಕಾರ ಪಡೆಯಲಿ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ. ನಾನು ಹಣ ಎತ್ತಿರುವ ವಿಚಾರ ಹೇಳಿದ್ದೇನೆ. ಎರಡು ಬಾರಿ ಸಂಸದರಾಗಿರುವವರು ಜವಾಬ್ದಾರಿಯಿಂದ ಮಾತನಾಡಬೇಕು.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಶ್ರೀಕಿಯನ್ನು ಬಂಧಿಸಿದ್ದು ಬಿಜೆಪಿ ಸರಕಾರ, ಬಿಟ್ಟು ಕಳುಹಿಸಿದ್ದು ಬಿಜೆಪಿ ಸರಕಾರ. 11 ಕೋಟಿ ರೂ. ಮೌಲ್ಯದ ಬಿಟ್‌ ಕಾಯಿನ್‌ ವಶಪಡಿಸಿಕೊಂಡಿ ದ್ದೇವೆ ಎಂದು ಹೇಳಿದ್ದು ಪೊಲೀಸ್‌ ಅಧಿಕಾರಿಗಳು. ಬುಟ್ಟಿಯಲ್ಲಿ ಹಾವಿಲ್ಲದೆ ಪೊಲೀಸ್‌ ಇಲಾಖೆ ಶ್ರೀಕಿಯನ್ನು ಬಂಧಿಸಿತಾ?
– ಡಿ.ಕೆ. ಸುರೇಶ್‌, ಕಾಂಗ್ರೆಸ್‌ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next