ಹೊಸನಗರ: ತಾಲೂಕಿನ ಯಡೂರು – ಸುಳುಗೋಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ.
ಯಡೂರು ಮತ್ತು ಸುಳುಗೋಡು ಗ್ರಾಪಂ ವ್ಯಾಪ್ತಿಯ ಅನೇಕ ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಕಳೆದ ಒಂದು ತಿಂಗಳಿಂದ ರೈತ ಜಮೀನು ಕಾಡುಕೋಣಗಳ ಹಾವಳಿಗೆ ತುತ್ತಾಗಿದ್ದು ತಮ್ಮ ಬೆಳೆಗಳನ್ನು ರಕ್ಷಿಸಲು ರೈತರು ಹೆಣಗಾಡುವಂತಾಗಿದೆ.
ಈ ಭಾಗದಲ್ಲಿ ಒಂಟಿಮನೆಗಳು ಹೆಚ್ಚಿದ್ದು ಮನೆಗೆ ಹೋಗಿ ಬರಲು ಕೂಡ ಜನರು ಭಯಪಡುವಂತಾಗಿದೆ. ವಾರದ ಹಿಂದೆ ವ್ಯಕ್ತಿಯೋರ್ವನ ಮೈಮೇಲೆ ಎರಗಿ ದೂಡಿ ಕೆಡವಿದ ಘಟನೆ ಕೂಡ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.
ವಾರಾಹಿ ಯೋಜನಾ ಪ್ರದೇಶದ ಮಾಣಿ ಜಲಾಶಯದ ಆಚೆ ಇದ್ದ ಕಾಡುಕೋಣಗಳು ಈಚೆಗೆ ಬಂದು ರೈತರಿಗೆ ತೊಂದರೆ ಕೊಡುತ್ತಿವೆ. ಐದಾರು ಕಾಡುಕೋಣಗಳು ಇರಬಹುದು ಎಂದು ಸ್ಥಳೀಯರಾದ ಯಡೂರು ಭಾಸ್ಕರ್ ಜೋಯ್ಸ್ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಕಾಡುಕೋಣ ಹಾವಳಿ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಣಿ ಡ್ಯಾಂ ಆಚೆಯ ಕಾಡಿಗೆ ಕಾಡುಕೋಣಗಳನ್ನು ಕಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ