ರಾಂಚಿ: ಭಾರತ ಕಂಡಂತ ಚಾಣಾಕ್ಷ ನಾಯಕ, ಹೆಲಿಕಾಪ್ಟರ್ ಹಿಟ್ ಮಾಸ್ಟರ್, ಚೆನ್ನೈ ಅಭಿಮಾನಿಗಳ ಪಾಲಿನ ಥಲಾ ಮಹೇಂದ್ರ ಸಿಂಗ್ ಧೋನಿ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಭಾರತಕ್ಕೆ ಐಸಿಸಿಯ ಎಲ್ಲಾ ಮೂರು ಪ್ರಮುಖ ಟ್ರೋಫಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿಯದ್ದು ವರ್ಣರಂಜಿತ ಕ್ರಿಕೆಟ್ ಅಧ್ಯಾಯ. ಮೂರು ಮಾದರಿಯ ನಾಯಕನಾಗಿ ಸಾಧನೆಯ ಉತ್ತುಂಗಕ್ಕೆ ಏರಿದವರು. ಚಿರತೆಯಂತೆ ವೇಗ, ಚೆಂಡನ್ನು ಆಗಸದೆತ್ತರಕ್ಕೆ ಬಾರಿಸುವ ತಾಕತ್ತು, ವಿಕೆಟ್ ಹಿಂದೆ ನಿಂತರಂತೂ ಮಿಂಚಿಗಿಂತಲೂ ವೇಗ ಈತನ ಕೈಚಳಕ!
1981ರ ಜುಲೈ 7ರಂದು ರಾಂಚಿಯಲ್ಲಿ ಮಾಹಿಯ ಜನನ. ಆರಂಭಿಕ ದಿನಗಳಲ್ಲಿ ಕಷ್ಟಪಟ್ಟಿದ್ದ ಮಾಹಿ ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದ್ದರು. ಆದರೆ ಸಾಧಿಸುವ ಹಸಿವು, ಹಂಬಲ ಈ ರಾಂಚಿಯ ಹುಡುಗನನ್ನು ವಿಶ್ವದ ಮನೆಮಾತಾನ್ನಾಗಿ ಮಾಡಿದೆ.
2007ರ ಒಂದೇ ಒಂದು ಟಿ20 ಪಂದ್ಯವಾಡಿ ಅನುಭವವಿರದ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ವಹಿಸಿದ ಮೊದಲ ಕೂಟದಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಅಡಿಮೇಲು ಮಾಡಿದರು. ಕ್ರಿಕೆಟ್ ಮೈದಾನದಲ್ಲಿ ವಿಚಿತ್ರ ಗ್ಯಾಂಬ್ಲಿಂಗ್ ನಡೆಸಿದರು.
2011ರಲ್ಲಿ ತವರು ನೆಲದಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು, ಐಸಿಸಿಯ ಮೂರು ಪ್ರಮುಖ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಖ್ಯಾತಿ ಪಡೆದರು.