Advertisement

ಜನ್ಮದಿನ ಅವಿಸ್ಮರಣೀಯವಾಗಿಸಿದ್ದ ಮೇರುನಟರು

11:40 AM Nov 25, 2018 | |

ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಚಿತ್ರ ರಂಗದ ಮೇರು ನಟರು ಮಂಡ್ಯದ ಗಂಡು ಅಂಬರೀಶ್‌ ಅವರಿಗೆ 60ನೇ ಜನ್ಮದಿನದ ಆಚರಣೆಯನ್ನು ಅವಿಸ್ಮರಣೀ ಯಗೊಳಿಸಿದ್ದರು. ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಸೂಪರ್‌ಸ್ಟಾರ್‌ ರಜನಿ ಕಾಂತ್‌, ನಟರಾದ ಚಿರಂಜೀವಿ, ಶತ್ರುಘ್ನ ಸಿನ್ಹಾ, ಜಯ ಪ್ರದಾ, ಸುನೀಲ್‌ ಶೆಟ್ಟಿ, ಮೋಹನ್‌ ಬಾಬು, ನಂದಮೂರಿ ಬಾಲಕೃಷ್ಣ, ಖುಷ್ಬೂ,

Advertisement

ಜಾಕಿಶ್ರಾಫ್ ಸೇರಿದಂತೆ ತಾರೆಯರ ಸಮೂಹವೇ ಅಂಬರೀಶ್‌ಗಾಗಿ ಒಂದೇ ವೇದಿಕೆಗೆ ಬಂದು, ಅಂಬಿಯನ್ನು ಹಾಡಿಹೊಗಳಿದ್ದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದ ಖ್ಯಾತ ನಟರಾದ ಅಮಿತಾಭ್‌ ಬಚ್ಚನ್‌, ಮೋಹನ್‌ಲಾಲ್‌, ಮಮ್ಮುಟ್ಟಿ, ಸುರೇಶ್‌ ಗೋಪಿ, ಅರ್ಜುನ್‌ ಸರ್ಜಾ, ವೆಂಕಟೇಶ್‌ ಹಾಗೂ ಶ್ರೀದೇವಿ ಅವರು ವಿಡಿಯೋ ಮೂಲಕ ತಮ್ಮ ಶುಭಾಶಯಗಳನ್ನು ಕಳುಹಿಸಿಕೊಟ್ಟಿದ್ದರು.

ಮಂಡ್ಯದ ಸಕ್ಕರೆ ಎಂದು ಸಂಬೋಧಿಸಿದ್ದ ರಜನಿ: ಅಂಬರೀಶ್‌ ಅವರು ನನ್ನ ಸ್ಫೂರ್ತಿ ಎಂದು ಹೇಳುತ್ತಲೇ ಮಾತು ಆರಂಭಿಸಿದ್ದ ಸೂಪರ್‌ಸ್ಟಾರ್‌ ರಜನಿಕಾಂತ್‌, ಅಂಬಿಯನ್ನು ಮಂಡ್ಯದ ಸಕ್ಕರೆಯಷ್ಟು ಸಿಹಿ ಎಂದು ಬಣ್ಣಿಸಿದ್ದರು. ಅಂಬಿ ಅವರು ತಮಗಾಗಿ ಏನನ್ನೂ ಬಯಸಿದ್ದಿಲ್ಲ. ಅವರೇನೇ ಮಾಡಿದ್ದರೂ, ಅದು ಬೇರೆಯವರಿಗೆ ಅನುಕೂಲ ಮಾಡುವುದೇ ಆಗಿರುತ್ತದೆ ಎಂದು ರಜನಿ ಹೇಳಿದ್ದರು.

ಅಂಬಿಯವರನ್ನು ಕನ್ನಡ ಚಿತ್ರರಂಗದ ಪಾಳೇಗಾರ ಎಂದೂ ಸಂಬೋಧಿಸಿದ್ದ ರಜನಿ, ಅಂಬರೀಶ್‌ರಲ್ಲಿ ಟನ್‌ಗಟ್ಟಲೆ ಸಕಾರಾತ್ಮಕ ಶಕ್ತಿಯಿದ್ದು, ಅವರು ಹೋದಲ್ಲೆಲ್ಲ ಅದು ಅನುರಣಿಸುತ್ತದೆ. ಅವರು ಕೃಷ್ಣ ಮತ್ತು ರಾಮ ಇಬ್ಬರ ಗುಣಗಳನ್ನೂ ಹೊಂದಿರುವವರು ಎಂದಿದ್ದರು.

ಎಳನೀರು ಎಂದಿದ್ದ ಚಿರಂಜೀವಿ: ಸ್ನೇಹ ಮತ್ತು ಸಂಬಂಧಕ್ಕೆ ಮತ್ತೂಂದು ಹೆಸರೇ ಅಂಬರೀಶ್‌. ಅವರು ಎಳನೀರಿದ್ದಂತೆ. ಹೊರಗೆ ಗಟ್ಟಿಯಾದರೂ, ಒಳಗೆ ಬಹಳ ಮೆದು ಎಂದಿದ್ದರು ನಟ ಚಿರಂಜೀವಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಮೋಹನ್‌ ಬಾಬು ಅವರು, ಅಂಬಿಯನ್ನು ಕರ್ನಾಟಕದ ಸಿಎಂ ಆಗಿ ನೋಡಲು ಬಯಸುತ್ತೇನೆ ಎಂದಾಗ ಕರತಾಡನ ಮುಗಿಲುಮುಟ್ಟಿತ್ತು.

Advertisement

ಜನರ ಡಾರ್ಲಿಂಗ್‌: ಇನ್ನು ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಅವರು ಅಂಬರೀಶ್‌ರನ್ನು ಜನರ ಡಾರ್ಲಿಂಗ್‌ ಹಾಗೂ ಕರ್ನಾಟಕದ ಹೆಮ್ಮೆ ಎಂದು ಕರೆದಿದ್ದರು.

ಮೌನಕ್ಕೆ ಶರಣಾಗಿದ್ದ ಮಂಡ್ಯದ ಗಂಡು: ತಮ್ಮ ಜನ್ಮದಿನವನ್ನು ಅಷ್ಟೊಂದು ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ಕನಸು ಮನಸಿನಲ್ಲೂ ಯೋಚಿಸದ ಅಂಬರೀಶ್‌ ಅವರು, ಅಂದು ಎಷ್ಟೊಂದು ಭಾವುಕರಾಗಿದ್ದರೆಂದರೆ, ತಮಗೆ ಮಾತುಗಳೇ ಹೊರಡುತ್ತಿಲ್ಲ ಎನ್ನುತ್ತಾ ಕೇವಲ ಥ್ಯಾಂಕ್ಯೂ ಎನ್ನುತ್ತಾ ತಮ್ಮ ಭಾಷಣವನ್ನು ಕೊನೆಗೊಳಿಸಿದ್ದರು.

ಅಂದು ಅವರಿಗೆ ಮೌನವೇ ಮಾತಾಗಿತ್ತು. ಅದರಲ್ಲೂ ನಿರ್ದೇಶಕ ಎಸ್‌. ನಾರಾಯಣ್‌ ಅವರು ಅಂಬಿಯವರಿಗೆಂದೇ ಬರೆದಿದ್ದ ಹಾಗೂ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ವಿಶೇಷ ಹಾಡನ್ನು ಕೇಳಿದಾಗಲಂತೂ ಅಂಬಿ ಭಾವಪರವಶರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next