ಅದೇನೋ ಗೊತ್ತಿಲ್ಲ, ಕೇರಿಗಳಲ್ಲಿ ಯಾರಧ್ದೋ ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ ಅಂದರೆ ಅದೇನೋ ಕುತೂಹಲ ಸಂಭ್ರಮ ನಮಗೆ. ಅವರು ಕರೆದರು ಕರೆಯದೆ ಇದ್ದರು ನಮ್ಮ ಹಾಜರಾತಿ ಮಾತ್ರ ಕಾಯಂ ಆಗಿ ಇರುತಿತ್ತು. ಇತ್ತೀಚಿನ ದಿನಗಳಲ್ಲಿ ಆ ಬರ್ತ್‌ಡೇ ಆಚರಣೆ ಮಾಡುವುದೇ ಒಂದು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ ಅದು ಬೇರೆ ಮಾತು ಬಿಡಿ.
ನಮ್ಮದು ಕೇರಿಯ ಸಾಮಾನ್ಯ ವರ್ಗದ ಕೆಳ ಸ್ತರದ ಕುಟುಂಬ. ಊಟಕ್ಕೆ ಇದ್ದರೆ, ಬಟ್ಟೆಗಿಲ್ಲ ತಟ್ಟೆಗಿದ್ದರೆ ಹೊಟ್ಟೆಗಿಲ್ಲ ಎನ್ನುವ ಪರಿಸ್ಥಿತಿ. ಆದರೂ ಮನೆಯ ಹಿರಿಯರು ಅದು ಹೇಗೋ ಆರ್ಥಿಕ ಪರಿಸ್ಥಿತಿಯನ್ನ ನಿರ್ವಹಣೆ ಮಾಡುತಿದ್ದರು. ಐದು ಜನ ಒಡಹುಟ್ಟಿದವರು, ಅವರ ಮಕ್ಕಳು ಅವರೊಟ್ಟಿಗೆ ನಾವು. ಕೂಡು ಕುಟುಂಬ. ಇಂತಹ ಸಮಯದಲ್ಲಿ ನಾವುಗಳು ಬರ್ತ್‌ಡೇ ಅನ್ನುವ ಕಲ್ಪನೆಯನ್ನು ಕನಸಲ್ಲೂ ಯೋಚಿಸಲು ಸಾಧ್ಯವಿರಲಿಲ್ಲ. ನಾವು ಕೇಕ್, ಅಲ್ಲಿ ಕೊಡುತ್ತಿದ್ದ ಚೂರು-ಪಾರು ಖಾರದ ಆಸೆಗೆ ಹೋಗುತ್ತಿದ್ದುದು ನಿಜ. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಆ ಸಂಭ್ರಮ-ಸಡಗರವನ್ನ ನೋಡಲೇ ಹೋಗುತ್ತಿದ್ದೆವು.
ಆ ಟೋಪಿ, ಮನೆಯ ಸಿಂಗಾರ, ಹೊಸ ಬಟ್ಟೆ ಇವೆಲ್ಲ ನಮ್ಮ ಪಾಲಿಗೆ ಒಂದು ಕನಸ್ಸೇ ಸರಿ. ತಿನ್ನಲು ಕೊಡುತ್ತಿದ್ದ ಸಮಯದಲ್ಲಿ ಶಿಸ್ತಾಗಿ ಹೋಗಿ ಲೈನಲ್ಲಿ ನಿಂತು ಅವರು ಕೊಟ್ಟದ್ದನ್ನು ತಾಯವ್ವನ ಗುಡಿಯ ಕಟ್ಟೆಗೆ ಕೂತು ಖಾಲಿ ಮಾಡಿ ಮನೆಗೆ ಬಾಯಿ ಒರೆಸಿಕೊಳ್ಳದೆ ಹೋಗುತ್ತಿದೆವು, ಮನೆಯವರಿಗೆಲ್ಲ ಗೊತ್ತಾಗಲಿ ನಾನು ಕೇಕ್ ತಿಂದು ಬಂದೆ ಎಂಬ ಉದ್ದೇಶ.
ಇದೆಲ್ಲ ಆಗಿ ರಾತ್ರಿ ಮಲಗುವ ಹೊತ್ತಲ್ಲಿ ಅವ್ವನ ತೊಡೆಯ ಮೇಲೆ ತಲೆ ಇಟ್ಟು “ಯಾಕ್ಕವ್ವ ನಮಗೆ ಈ ಬರ್ತ್‌ಡೇ-ಗಿರ್ತ್‌ಡೇ ಮಾಡಲ್ಲ, ಒಂದೇ ಸಲ ನಂದು ಹ್ಯಾಪಿ ಬರ್ತ್‌ಡೇ ಮಾಡ್ರವ್ವ ಅನ್ನುತ್ತಿದ್ದೆ. ಅವ್ವ ನನ್ನ ಮಕ್ಕಳ ಈ ಬಹು ದಿನದ, ಪುಟ್ಟ ಬಯಕೆಯನ್ನ ಈಡೇರಿಸಲು ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯನ್ನ ಮುಖದಲ್ಲಿ ತೋರಿಸುತ್ತಿದ್ದಳು. ಆದರೂ ಮುಂದಿನ ನಿನ್ನ ಹುಟªಬ್ಬಕ್ಕೆ ಹೊಸ ಅಂಗಿ-ಪ್ಯಾಂಟು ಹೊಲಿಸಿ, ಹಂಪಿಗೆ ಹೋಗೋಣ ಎಂದು ಸಮಾಧಾನ ಪಡಿಸುತ್ತಿದಳು. ಪ್ರತಿ ಬಾರಿ ಈ ವಿಷಯ ಮುಂದಿಟ್ಟಾಗಲೆಲ್ಲ ಏನೋ ಕಾರಣ ಕೊಟ್ಟು ನಮ್ಮ ಆಸೆ ಯನ್ನ ಜೀವಂತವಾಗಿಡುತ್ತಿದಾಳೆ. ಆದರೆ ಅದು ನಮ್ಮ ಜೀವನದಲ್ಲಿ ಇಂದಿಗೂ ನನಸ್ಸಾಗದ ಕನಸುಗಳಲ್ಲಿ ಒಂದು.
ನಮಂತ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹುಟ್ಟಿದ ಮಕ್ಕಳ ಎದೆಯಲ್ಲಿ ಇನ್ನು ಎಷ್ಟೋ ಆಸೆಗಳು ಇಂದಿಗೂ ಜೀವಂತವಾಗಿವೆ. ಆದರೆ ಇಂದಿನ ದಿನಗಳಲ್ಲಿ ಹಾಗಲ್ಲ ಜೇಬಲ್ಲಿ ದುಡಿಲ್ಲದಿದ್ದರೂ ಪರವಾಗಿಲ್ಲ ಸಾಲ ಮಾಡಿಯಾದರೂ ಮಾಡ್ತೀನಿ ಅನ್ನೋ ಹಠದ ಜನ ಇದ್ದಾರೆ. ಪಕ್ಕದ ಮನೆಯವರು 2ಕೆಜಿ ಕೇಕ್ ತಂದರೆ ನಾನು 4ಕೆಜಿ ಕೇಕ್ ತರುತ್ತೇನೆ ಅನ್ನೋ ಮನೋಭಾವವನ್ನ ಬೆಳೆಸಿಕೊಂಡಿದ್ದಾರೆ. ಇದು ತಪ್ಪಲ್ಲ. ಆದರೆ ಏನು ಗೊತ್ತಿಲ್ಲದ ಆ ವಯಸ್ಸಿನಲ್ಲಿ ಬರ್ತ್‌ಡೇ ವಿಶೇಷ ಉಡುಗೊರೆಗಳು, ಪಾರ್ಟಿ ಇವೆಲ್ಲವನ್ನು ಏರ್ಪಡಿಸಿದಾಗ ಮಕ್ಕಳಲ್ಲಿ ಹೆತ್ತವರು ಏನು ಬೇಕಾದರೂ ಕೊಡಿಸುತ್ತಾರೆ ಅನ್ನೋ ಭಾವನೆ ಬೆಳೆಯುತ್ತದೆ. ಅಲ್ಲೇ ನಿಮ್ಮ ಬದುಕಿನ ಒಂದು ವಿಷಾದದ ಅಧ್ಯಾಯ ಆರಂಭವಾಗುತ್ತದೆ. ಮಕ್ಕಳಿಗೆ ನೀವು ಹೇಗೆ ತಂದಿರಿ ಅನ್ನೋದು ಕಾಣುವುದಿಲ್ಲ. ತಂದಿದ್ದು ಮಾತ್ರ ಕಾಣುತ್ತದೆ.ಮುಂದೆ ನೀವು ಅವರ ಯಾವುದಾದರೂ ಒಂದು ಬೇಡಿಕೆಯನ್ನ ಪೂರೈಸಲು ಅಶಕ್ತರಾದರೆ ನಿಮನ್ನ ಬೈಯಲು, ತೆಗಳಲು ಪ್ರಾರಂಭ ಮಾಡುತ್ತಾರೆ. ಅದಕ್ಕೆ ಮಕ್ಕಳಿಗೆ ಮೊದಲೇ ಕಷ್ಟದ ಪರಿಸ್ಥಿತಿಯನ್ನು ಅರಿವು ಮಾಡಿಸಿ. ಡಾ| ಏ.ಪಿ. ಜೆ. ಅಬ್ದುಲ್ ಕಲಾಂ ಅವರು ಹುಟ್ಟುಹಬ್ಬದ ಕುರಿತಾಗಿ ಕೇಳಿದಾಗ ಹೀಗೆ ಹೇಳುತ್ತಾರೆ “ಆ ದಿನ ನೀವು ಅಳುವುದನ್ನು ಕಂಡು ನಿಮ್ಮ ಹೆತ್ತವರು ನಗುತ್ತಾರೆ ಅಂತ’. ಹುಟ್ಟುಹಬ್ಬ ಆಚರಿಸಿಕೊಳ್ಳುವುದು ದೊಡ್ಡಸ್ತಿಕೆಯಲ್ಲ ಹುಟ್ಟನ್ನು ಸಾರ್ಥಕಗೊಳಿಸುವುದೇ ದೊಡ್ಡತನ.
ಬಸಂತ್ ಡಿ.
ಕೊಟ್ಟೂರೇಶ್ವರ ಪಿಯು ಕಾಲೇಜು, ಕೊಟ್ಟೂರು