Advertisement

ಜನನ-ಮರಣ ನೋಂದಣಿ ಸಕಾಲಕ್ಕೆ ನಡೆಯಲಿ: ಡಿಸಿ ರಾಮಚಂದ್ರನ್‌

07:42 PM Jul 07, 2021 | Team Udayavani |

ಬೀದರ: ಜನನ-ಮರಣ ನೋಂದಣಿ 1969 ಕಾಯ್ದೆಯು ಜಾರಿಯಾಗಿ 51 ವರ್ಷಗಳಾಗಿದ್ದು, ಇಂತಹ ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು. ಈ ಕಾಯ್ದೆಯ ಮಾಹಿತಿಯು ಪ್ರತಿ ಮನೆ ಬಾಗಿಲಿಗೆ ತಲುಪಬೇಕು. ಜನನ ಮರಣ ನೋಂದಣಿಯು ಸಕಾಲಕ್ಕೆ ಆಗುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಡಿಸಿ ರಾಮಚಂದ್ರನ್‌ ಆರ್‌. ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿ.ಪಂ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜನನ-ಮರಣ ನೋಂದಣಿ ಕಾಯ್ದೆ 1969ರ ಕುರಿತು ನಗರದ ರಂಗ ಮಂದಿರದಲ್ಲಿ ಜಿಲ್ಲೆಯ ಪಿಡಿಒ ಮತ್ತು ಗ್ರಾಮ ಲೆಕ್ಕಿಗರಿಗಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜನರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ತಲುಪಬೇಕು ಎನ್ನುವುದು ನ್ಯಾಯಾಲಯ ಮತ್ತು ಸರ್ಕಾರದ ಉದ್ದೇಶವಾಗಿದೆ. ಇಂತಹ ಕಾನೂನುಗಳನ್ನು ಅರಿತು ಜನರಿಗೆ ಸಕಾಲಕ್ಕೆ ಸೇವೆ ಕೊಡಲು ತಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಪಂ ಸಿಇಒ ಜಹೀರಾ ನಸೀಮ್‌ ಮಾತನಾಡಿ, ಒಬ್ಬ ವ್ಯಕ್ತಿಯ ಮರಣದ ನಂತರ ಜೀವ ವಿಮೆ, ವಾರಸಾ, ಆಸ್ತಿ ಹಕ್ಕು ಇತ್ಯರ್ಥ, ಮುಟೇಶನ್‌ನಂತಹ ಸಾಕಷ್ಟು ಪ್ರಕ್ರಿಯೆಗಳು ನಡೆಯುತ್ತವೆ. ಹೀಗಾಗಿ ತಮ್ಮ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಸರಿಯಾಗಿ ನಡೆಯುತ್ತಿರುವುದರ ಬಗ್ಗೆ ಪಿಡಿಒ ಮತ್ತು ಗ್ರಾಮ ಲೆಕ್ಕಿಗರು ಗಮನ ಹರಿಸಬೇಕು.

ನಮ್ಮ ಎಲ್ಲ ನೀತಿ-ನಿರ್ಧಾರಗಳು ಜನನ ಮತ್ತು ಮರಣದ ನೋಂದಣಿಯ ಆಧಾರದ ಮೇಲೆ ಗುರುತಿಸಲಾಗುತ್ತದೆ. ಜನನ-ಮರಣ ನೋಂದಣಿಯಿಂದ ಲಿಂಗಾನುಪಾತ ಮತ್ತು ಭ್ರೂಣ ಹತ್ಯೆಯಂತಹ ಪ್ರಕರಣಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದರು.

Advertisement

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ ಯದಲಾಪುರೆ ಮಾತನಾಡಿ, ದೇಶದ ಜನಸಂಖ್ಯೆಯನ್ನು ಅಂದಾಜಿಸಲು, ತಾಯಿಯ ಗರ್ಭಧಾರಣಾ ಶಕ್ತಿಯನ್ನು ಹಾಗೂ ವಿವಾಹವಾದ ವಯಸ್ಸು ಮತ್ತು ಲಿಂಗಾನುಪಾತದ ಬಗ್ಗೆ ತಿಳಿಯಲಿಕ್ಕೆ, ಜನಗಣತಿಯ ಪ್ರಮುಖ ಅಂಕಿಸಂಖ್ಯೆ ಪಡೆಯಲು ಮತ್ತು ಕುಟುಂಬ ಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲು, ಜಿಲ್ಲಾವಾರು ಮರಣ ಪ್ರಮಾಣ ಕಂಡು ಹಿಡಿಯಲು, ವೈದ್ಯಕೀಯ ಸಂಶೋಧನೆಯಂತಹ ಅನೇಕ ಕಾರಣಗಳಿಗಾಗಿ ಜನನ ಮತ್ತು ಮರಣ ನೋಂದಣಿ ಅತೀ ಅವಶ್ಯವಾಗಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಸಿದ್ರಾಮ ಟಿ.ಪಿ. ಮಾತನಾಡಿ, ಹೈಕೋರ್ಟ್‌ ನಿರ್ದೇಶನದನ್ವಯ ಈ ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ಜಿಲ್ಲಾಡಳಿತ ಮತ್ತು ಜಿ.ಪಂ ಅಗತ್ಯ ಸಹಕಾರ ನೀಡಿವೆ ಎಂದರು. ಸಿವಿಲ್‌ ನ್ಯಾಯಾಧೀಶರಾದ ಈಶ್ವರ ಮುಸಲ್ಮಾರಿ,  ತಹಶೀಲ್ದಾರ್‌ ಗಂಗಾದೇವಿ ಸಿ.ಎಚ್‌., ರಮೇಶಕುಮಾರ ಪೆದ್ದೆ, ಶರಣಯ್ಯ ಮಠಪತಿ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next